ಬಳ್ಳಾರಿ : ಯುಪಿಯ ಹತ್ರಾಸ್ನಲ್ಲಿ ನಡೆದ ಗುಂಪು ಅತ್ಯಾಚಾರ ಘಟನೆ ಖಂಡಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಎಐಎಮ್‍ಎಸ್‍ಎಸ್, ಎಐಡಿಎಸ್‍ಒ ಮತ್ತು ಎಐಡಿವೈಒ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಎಐಎಮ್ಎಸ್ಎಸ್ನ ಜಿಲ್ಲಾಧ್ಯಕ್ಷರಾದ ಎ.ಶಾಂತಾ ಮಾತನಾಡಿ, ಯುವತಿಯ ಮೇಲೆ ಗುಂಪು ಅತ್ಯಾಚಾರಗೈದ ನಾಲ್ಕು ಜನ ಯುವಕರು ಅವಳ ನಾಲಿಗೆ ಕತ್ತರಿಸಿದ್ದಾರೆ. ಬೆನ್ನು ಮೂಳೆ ಮುರಿದು ಮತ್ತು ಬಹುಪಾಲು ಸಾಯಿಸಿಯೇ ಬಿಟ್ಟಿದ್ದರು. ಸೆಪ್ಟೆಂಬರ್ 14ರಿಂದ ಜೀವನ್ಮರಣದ ಹೋರಾಟ ನಡೆಸಿದ ಹತ್ರಾಸಿನ ಯುವತಿ ದೆಹಲಿಯ ಸಫ್ದಾರ್‌ಜಂಗ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ. ಈ ಹೃದಯವಿದ್ರಾವಕ ಘಟನೆ ಖಂಡಿಸಲು ಯಾವುದೇ ಪದಗಳು ಸಾಲುವುದಿಲ್ಲ. ನಮ್ಮ ದೇಶದಲ್ಲಿ ಮಹಿಳೆಯರ ಶೋಚನೀಯ ಮತ್ತು ವಾಸ್ತವ ಪರಿಸ್ಥಿತಿಯನ್ನ ಇಂತಹ ಘಟನೆಗಳು ತೋರಿಸುತ್ತವೆ ಎಂದರು.
ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟಿನಲ್ಲಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕು ಹಾಗೂ ಅಶ್ಲೀಲತೆ, ಡ್ರಗ್ಸ್ ಮತ್ತು ಮದ್ಯ ಕೊನೆಗೊಳಿಸಬೇಕು ಎಂದರು.
ಇಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಚಳವಳಿಯನ್ನು ಬಲಗೊಳಿಸಬೇಕು. ಮಹಿಳೆಯರ ಭದ್ರತೆ, ಘನತೆ ಮತ್ತು ಸಮಾನತೆ ಖಾತ್ರಿಪಡಿಸಲು ಒಂದು ಬಲಿಷ್ಠ ಸಾಮಾಜಿಕ-ಸಾಂಸ್ಕೃತಿಕ ಚಳವಳಿ ನಡೆಸಬೇಕೆಂದು ವಿದ್ಯಾರ್ಥಿ-ಯುವಜನರಿಗೆ ಕರೆ ನೀಡಿದರು.
ಈ ಪ್ರತಿಭಟನೆಯಲ್ಲಿ ಎಐಡಿವೈಒನ ಜಿಲ್ಲಾ ನಾಯಕರಾದ ಜಗದೀಶ್ ನೇಮಕಲ್, ಎಐಡಿಎಸ್‍ಒನ ಜಿಲ್ಲಾ ಉಪಾಧ್ಯಕ್ಷರಾದ ಗುರಳ್ಳಿ ರಾಜ, ಜಿಲ್ಲಾ ಸಮಿತಿ ಸದಸ್ಯರಾದ ಕೆ.ಈರಣ್ಣ, ಶಾಂತಿ, ಎಐಎಮ್ಎಸ್ಎಸ್ನ ಜಿಲ್ಲಾ ಸಮಿತಿ ಸದಸ್ಯರಾದ ವಿದ್ಯಾವತಿ ಹಾಗೂ ಮತ್ತಿತರರು ಭಾಗವಹಿಸಿದ್ದರು.