ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಯೊಬ್ಬರು ಸಹಜ ಮರಣ ಹೊಂದಿದ್ದ ಮಹಿಳೆಯ ಹೆಸರನ್ನು ಕೋವಿಡ್ ಸಾವಿನ ಪಟ್ಟಿಯಲ್ಲಿ ದಾಖಲಿಸಿ, ಹಣ ದೋಚಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಎಂಬ ಆರೋಪವನ್ನು ಹೆದರಿಸುತ್ತಿರೋದು ತನಿಖೆಯಿಂದ ಈಗ ಬೆಳಕಿಗೆ ಬಂದಿದೆ.
ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅರೋಗ್ಯ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್ ಸೂಕ್ತ ತನಿಖೆ ನಡೆಸಿ, ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಯಾಗಿದ್ದ ಕೆ.ಪಾಂಡುರಂಗ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಸಾಮಾನ್ಯ ಮರಣ ಹೊಂದಿದ ಮಹಿಳೆಯೊಬ್ಬರಿಗೆ ಕೋವಿಡ್ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ ಎಂದು ಸುಳ್ಳು ವರದಿ ನೀಡಿರುವ ಹಾಗೂ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳು (ವರ್ಗೀಕರಣ ನಿಯಂತ್ರಣ ಮತ್ತು ಆಪೀಲು) 1957ರ ಅನ್ವಯ ನಿಯಮಾವಳಿ 10(1)ರ ಪ್ರಕಾರ ಅಧಿಕಾರ ಚಲಾಯಿಸಿ ಅಮಾನತು ಮಾಡಲಾಗಿದೆ.
ಘಟನೆಯ ವಿವರ ಇಂತಿದೆ
ಜುಲೈ 17ರಂದು ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಎಸ್ಆರ್‌ಎಫ್‌ಐಡಿ ಸಂಖ್ಯೆ 2952800858845/2952800858767 ಸಂಖ್ಯೆಯಲ್ಲಿ ಪಾಸಿಟಿವ್ ಎಂದು ಹೆಚ್.ಶಂಕ್ರಮ ಇವರ ವರದಿ ಬಂದಿದ್ದು ಇವರ ದೂರವಾಣಿ ಸಂಖ್ಯೆ 9035998310 ಇವರನ್ನ ಸಂಪರ್ಕಿಸಿದಾಗ ಆಕೆಯ ಕುಟುಂಬದ ಸದಸ್ಯರು 7 ದಿನಗಳ ಹಿಂದೆ ಮೃತಪಟ್ಟಿರುತ್ತಾರೆಂದು ತಿಳಿಸಿದ್ದಾರೆ.
ನಂತರ ವೈದ್ಯಾಧಿಕಾರಿಗಳು ಕಿರಿಯ ಪಾಥಮಿಕ ಆರೋಗ್ಯ ಅಧಿಕಾರಿ ರೇಣುಕಾರಿಗೆ ಮಾಹಿತಿ ಪಡೆದುಕೊಂಡು ಬರುವಂತೆ ತಿಳಿಸಿದಾಗ ಹೆಚ್.ಶಂಕ್ರಮ್ಮನವರು ಕ್ಯಾದಿಗೆಹಾಳ ಗ್ರಾಮದವರಾಗಿದ್ದು ಕುಟುಂಬದ ಸದಸ್ಯರನ್ನು ವಿಚಾರಿಸಲಾಗಿ ಮೇ 19ರಂದು ಸಹಜ ಮರಣ ಹೊಂದಿರುತ್ತಾರೆಂದು ತಿಳಿಸಿದ ಮಾಹಿತಿಯನ್ನು ವೈದ್ಯಾಧಿಕಾರಿಗಳಿಗೆ ವರದಿ ಮಾಡಿರುತ್ತಾರೆ.
ಆರೋಪಿಯ ಮೊಬೈಲ್ನಿಂದಲೇ ನೋಂದಣಿ
ನಂತರ ಜುಲೈ 19ರಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ತಾಲೂಕು ಆರೋಗ್ಯ ಅಧಿಕಾರಿಗಳು ಕುರುಗೋಡು ತಾಲೂಕು ಕೋವಿಡ್-19 ನೋಡಲ್ ಅಧಿಕಾರಿಗಳು, ಮೈಕ್ರೋ ಬಯೋಲಾಜಿಸ್ಟ್ ಹಾಗೂ ಜಿಲ್ಲಾ ಸರ್ವೇಕ್ಷಣಾ ಕಚೇರಿ ಡಾಟಾ ಎಂಟ್ರಿ ಮ್ಯಾನೇಜರ್ ಸಮಕ್ಷಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ವಿಚಾರಿಸಿದಾಗ ಆರಂಭದಲ್ಲಿ ತಾವು ಯಾವುದೇ ಕೋವಿಡ್ ಪರೀಕ್ಷೆಯನ್ನು ಜುಲೈ 17ರಂದು ಮಾಡಿಲ್ಲವೆಂದು ತಿಳಿಸಿದ್ದು ಸಂಶಯ ಬಂದು ಪರಿಶೀಲಿಸಿದಾಗ ಜುಲೈ 17ರಂದು ಸದರಿ ತಂತಾಂಶ್ರದಲ್ಲಿ ನೊಂದಾಯಿಸಲಾದ ಮೊಬೈಲ್ ಸಂಖ್ಯೆ ಪಾಂಡುರಂಗ ಅವರದ್ದೇ ಆಗಿದ್ದು, ಇದರ ಮೂಲಕ ಎಸ್‌ಆರ್‌ಎಫ್‌ಐಡಿ ಸಂಖ್ಯೆ ಕ್ರಿಯೆಟ್ ಆಗಿದ್ದು ಅವುಗಳಲ್ಲಿ ಹೆಚ್.ಶಂಕ್ರಮ್ಮನವರ ಹೆಸರು ಕಂಡು ಬಂದಿರುತ್ತದೆ.
ಇದೆಲ್ಲವನ್ನೂ ಕೂಲಂಕಶವಾಗಿ ಪರಿಶೀಲಿಸಿದ ವಿಚಾರಣಾ ತಂಡವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಜುಲೈ 17ರಂದು ಸ್ವ್ಯಾಬ್ ಟೆಸ್ಟ್ ಮಾಡುವ ಕರ್ತವ್ಯ ಇಲ್ಲದೇ ಇದ್ದರೂ ಮಧ್ಯಾಹ್ನದ ಅವಧಿಯಲ್ಲಿ ಕೆ.ಪಾಂಡುರಂಗ ತಮ್ಮ ವೈಯಕ್ತಿಕ ಲಾಭಕ್ಕಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ಮತ್ತು ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ಸುಳ್ಳು ವರದಿ ನೀಡಿದ್ದು ಗೊತ್ತಾಗಿದೆ.
ಕುರುಗೋಡು ಪೊಲೀಸ್ ಠಾಣೆಯಲ್ಲಿ ವೈದ್ಯಾಧಿಕಾರಿಗಳು ನೀಡಿದ ದೂರಿನ ಅನ್ವಯ ದೂರು ದಾಖಲಾಗಿದ್ದು, ಜುಲೈ 19ರಂದೇ ಸದರಿ ಸಿಬ್ಬಂದಿಯನ್ನು ನಿಯಮಾನುಸಾರ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.