ಬಳ್ಳಾರಿ: ಕೆಂಪು ಗೂಟದ ಕಾರಿನ ಸೌಕರ್ಯದ ಬೆನ್ನ ಹಿಂದೆ ಬಿದ್ದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ನಿತೀಶ ಕುಮಾರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಾ.ಜೋಳದ ರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಪದವಿಪೂರ್ವ, ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೃಹತ್ ಐಎಎಸ್ ಕಾರ್ಯಾಗಾರದಲ್ಲಿ ಮಾತನಾಡಿದರು.
ಐಎಎಸ್, ಕೆಎಎಸ್ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದರೆ ಕೆಂಪುಗೂಟದ ಕಾರಿನ ಸೌಕರ್ಯ ದೊರಕಲಿದೆ ಎಂಬ ಆಶಾ ಭಾವನೆ ಪ್ರತಿಯೊಬ್ಬರಲ್ಲೂ ಇದೆ. ಆ ಆಶಾ ಭಾವನೆಯನ್ನು ಮೊದಲು ನಿಮ್ಮ ಮನಸ್ಸಿಂದ ತೆಗೆದು ಹಾಕಿ. ಸ್ಪರ್ಧಾತ್ಮಕ ಪರೀಕ್ಷೆ ಎಂದರೆ ಅದೊಂದು ಮುಳ್ಳಿನ ಹಾಸಿಗೆ. ಅಂತಹ ಹಾಸಿಗೆಯಿಂದ ಮೇಲೆದ್ದು ಬರೋದೇ ದೊಡ್ಡ ಸವಾಲು ಎಂಬಂತಾಗಿದೆ. ದಿನಪತ್ರಿಕೆ, ನಿಯತಕಾಲಿಕೆಗಳನ್ನು ನಿರಂತರ ಅಧ್ಯಯನ ಮಾಡುತ್ತಿದ್ದರೆ ಸಾಕು. ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಆದರೆ, ಅದನ್ನೇ ದೊಡ್ಡದೆಂದು ಭಾವಿಸಿ ಊಟ, ನೀರು ಹಾಗೂ ಕೆಲಸ ಬಿಟ್ಟು ಓದುವ ಅಗತ್ಯವಿಲ್ಲ ಎಂದರು.
ನಾನು ಇಂಜಿನಿಯರಿಂಗ್ ಓದುತ್ತಿದ್ದ ವೇಳೆಯೆ ಐಎಎಸ್ ಪರೀಕ್ಷೆಗೆ ಪೂರ್ವ ತಯಾರಿ ನಡೆಸಿದ್ದೆ. ಆ ಸಮಯದಲ್ಲಿ ಬಹಳ ಜನ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಾರೆ. ಆಗ ನಾವು ಉತ್ಸಾಹ ಕಳೆದುಕೊಳ್ಳಬಾರದು. ಉತ್ಸಾಹ ಕಳೆ ಗುಂದಿಸುವಂತಹ ಮಾತುಗಳಿಗೆ ತಲೆಕೆಡಿಸಿಕೊಳ್ಳಬಾರದು. ನಿಮ್ಮ ಮೇಲೆ ನೀವು ನಂಬಿಕೆ ಆತ್ಮವಿಶ್ವಾಸ ಇಟ್ಟು ಪ್ರಯತ್ನಿಸಿದರೆ ಐಎಎಸ್ ಸಾಧನೆ ಸುಲಭವಾಗಲಿದೆ. ನಾನು ಕೂಡ ಮೂರು ಪ್ರಯತ್ನಗಳಲ್ಲಿ ಪಾಸಾದೆ. ಪದವಿಗಳನ್ನು ಪಾಸ್ ಮಾಡಲು ವಾರದ ಅಧ್ಯಯನ ಸಾಕಾಗಬಹುದು. ಆದರೆ ಐಎಎಸ್ಗೆ ವರ್ಷಗಳು ಬೇಕು. ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾಧಿಸಲು ಸಾಧ್ಯ ಎಂದ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರಪ್ಪ, ಹಗರಿಬೊಮ್ಮನ ಹಳ್ಳಿ ತಹಸೀಲ್ದಾರ್ ಆಶಪ್ಪ ಪೂಜಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶಕುಮಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್.ರಾಜಪ್ಪ, ಅಮಿತ್ ಬಿದರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.