ಬಳ್ಳಾರಿ: ನಗರದ ಆಟೋಮೊಬೈಲ್ಸ್ ಅಸೋಸಿಯೇಶನ್ ಮತ್ತು ಲಾರಿ ಮೆಕ್ಯಾನಿಕ್ಸ್ ಸಂಘದ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ನಡೆಸಲಾಗುತ್ತಿರುವ ಅನಿರ್ದಿಷ್ಟಾವಧಿ ಧರಣಿ ಇಂದು 14 ದಿನಕ್ಕೆ ಕಾಲಿಟ್ಟಿದೆ.
ಧರಣಿಯಲ್ಲಿ ಪಾಲ್ಗೊಂಡಿದ್ದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರವಿ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರವು ಕ್ಯಾಬಿನೆಟ್ ಪ್ರೈಮರಿ ನೋಟಿಫಿಕೇಶನ್ ಹೊರಡಿಸಿ, ಬಳ್ಳಾರಿ ಜಿಲ್ಲೆಯನ್ನು ಹೊಸಪೇಟೆ ಮತ್ತು ಬಳ್ಳಾರಿ ಜಿಲ್ಲೆ ಎಂದು ವಿಭಜನೆ ಮಾಡಲು ನಿರ್ಧಾರ ಮಾಡಿದೆ. ಆದರೆ ಅದು ಅತಂತ್ರವಾದ ನಿರ್ಣಯವಾಗಿದೆ ಎಂದರು.
ನಮ್ಮದು ಪ್ರಜಾಪ್ರಭುತ್ವ ಆಡಳಿತವಾಗಿದ್ದರೂ ಜನರ ಅಭಿಪ್ರಾಯ ಸಂಗ್ರಹ ಮಾಡದೇ ರಾತ್ರೋ ರಾತ್ರಿಯೇ ಕ್ಯಾಬಿನೆಟ್ನಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಖಂಡನೀಯ. ಇದು ಪ್ರಜಾತಂತ್ರಕ್ಕೆ ವಿರುದ್ದವಾಗಿದೆ ಎಂದು ದೂರಿದರು.
ಬಳ್ಳಾರಿ ಹೋರಾಟ ಸಮಿತಿಯ ಸದಸ್ಯರಾದ ಪುರುಷೋತ್ತಮ ಗೌಡ, ಚಾನಾಳ ಶೇಖರ್, ಸಿದ್ದಮಲ್ಲ ಮಂಜುನಾಥ, ಟಿ.ಜಿ. ವಿಠಲ್, ರವಿ ಕುಮಾರ್ ಮತ್ತು ಬಳ್ಳಾರಿ ನಗರ ಆಟೋಮೊಬೈಲ್ಸ್ ಅಸೋಸಿಯೇಶನ್ ಮತ್ತು ಬಳ್ಳಾರಿ ಲಾರಿ ಮೆಕ್ಯಾನಿಕ್ಸ್ ಸಂಘದ ಸದಸ್ಯರು ಭಾಗವಹಿಸಿದ್ದರು.