ಬಳ್ಳಾರಿ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಕೋವಿಡ್ ಲಸಿಕೆ ವಿತರಣಾ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ ಡಾ.ಹೆಚ್.ಎಲ್ ಜನಾರ್ದನ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರ ಸಮಕ್ಷಮದಲ್ಲಿ ಹಿರಿಯ ನಾಗರಿಕರಿಗೆ ಕೋವಿಡ್ -19 ಲಸಿಕೆ ಚುಚ್ಚುಮದ್ದು ಅಭಿಯಾನಕ್ಕೆ ಚಾಲನೆ ದೊರೆಯಿತು.
ಬೆಳಗ್ಗೆ 10 ಗಂಟೆಯ ಸುಮಾರಿಗೆ ಹತ್ತಾರು ಮಂದಿ ಹಿರಿಯ ನಾಗರಿಕರು ಕೋವಿಡ್ ಲಸಿಕೆ ಚುಚ್ಚುಮದ್ದು ಹಾಕಿಸಿಕೊಳ್ಳುವ ಸಲುವಾಗಿ ಎರಡ್ಮೂರು ಗಂಟೆಗಳ ಕಾಲ ಲಸಿಕಾ ವಿತರಣಾ ಕೇಂದ್ರದಲ್ಲಿ ಕಾದು ಕುಳಿತುಕೊಂಡು ಸುಸ್ತಾಗಿದ್ದರು. ಮಧ್ಯಾಹ್ನ ಒಂದರ ಸುಮಾರಿಗೆ ಕೋವಿಡ್ ಲಸಿಕೆ ಚುಚ್ಚುಮದ್ದನ್ನು ನೀಡಲಾಯಿತು.
ಇನ್ನು ಹೊಸಪೇಟೆ ನಗರದ ನೂರರ ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿಂದು ಹಿರಿಯ ನಾಗರಿಕರಿಗೆ ಕೊರೊನಾ ಲಸಿಕೆಯನ್ನು ಹಾಕಲಾಯಿತು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಲೀಂ ಮಾತನಾಡಿ, ಆನ್ಲೈನ್ ಹಾಗೂ ನೂರು ಹಾಸಿಗೆ ಆಸ್ಪತ್ರೆ ಲಸಿಕೆ ಹಾಕಿಸಿರುವ ನೋದಂಣಿ ಕಾರ್ಯ ನಡೆದಿದೆ. ಒಂದು ದಿನಕ್ಕೆ 200 ಲಸಿಕೆ ಹಾಕುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಿರಿಯ ನಾಗರಿಕರಿಗೆ, 45 ರಿಂದ 59 ವರ್ಷದ ಗಂಭೀರ ಕಾಯಿಲೆಯ ರೋಗಿಗಳಿಗೆ ಲಸಿಕೆ ಹಾಕಲಾಗುತ್ತದೆ. ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳದ ಎಲ್ಎಫ್ಡಬ್ಲ್ಯು, ಆರೋಗ್ಯ ಸಿಬ್ಬಂದಿ, ಪೊಲೀಸರಿಗೆ ಸೇರಿದಂತೆ ಇತರರಿಗೆ ಲಸಿಕೆಯನ್ನು ಹಾಕಲಾಗುತ್ತಿದೆ. ಅಲ್ಲದೇ, ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಂಡ ಕೊರೊನಾ ವಾರಿಯರ್ಸ್ಗೆ ಸಹ ಲಸಿಕೆಯನ್ನು ಹಾಕಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತಗ್ಗಿದ ಕೊರೊನಾ ಅಬ್ಬರ
ಕಳೆದ ವರ್ಷ ಮಹಾಮಾರಿ ಹರಡುವಿಕೆ ಅಬ್ಬರದ ಅಲೆ ಗಣಿಜಿಲ್ಲೆಯಲ್ಲಿ ಮುಗಿಲ ಮುಟ್ಟಿತ್ತಾದರೂ ಕಾಲಕ್ರಮೇಣ ಸೋಂಕು ಹರಡುವಿಕೆ ಪ್ರಮಾಣ ಕಮ್ಮಿಯಾಗಿತ್ತು. ಆದರೀಗ, ಕೇವಲ ಆರೇಳು ಪ್ರಕರಣಗಳು ಮಾತ್ರ ಕಂಡು ಬಂದು ಕೊರೊನಾ ಅಬ್ಬರದ ಅಲೆಯನ್ನ ಗಣನೀಯವಾಗಿ ಕಮ್ಮಿ ಮಾಡಿದೆ.
ಈ ಕುರಿತು ಈ ಟಿವಿ ಭಾರತದೊಂದಿಗೆ ಮಾತನಾಡಿದ ಡಿಹೆಚ್ಒ ಡಾ.ಹೆಚ್.ಎಲ್.ಜನಾರ್ದನ ಅವರು, ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 2 ಸಾವಿರಕ್ಕೂ ಅಧಿಕ ಮಂದಿಯನ್ನ ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಆ ಪೈಕಿ ಕೇವಲ ಆರೇಳು ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ಹೀಗಾಗಿ, ಜಿಲ್ಲಾದ್ಯಂತ ಕೋವಿಡ್ - 19 ಸೋಂಕು ಗಣನೀಯವಾಗಿ ಕಡಿಮೆಯಾಗಿದೆ ಎಂದರು.