ಬಳ್ಳಾರಿ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅನರ್ಹ ಶಾಸಕರ ರಾಜೀನಾಮೆ ಹಾಗೂ ಜೆಡಿಎಸ್ - ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟ ಸರ್ಕಾರದ ಪತನಕ್ಕೆ ಕಾರಣರಾಗಿದ್ದು, ಕೂಡಲೇ ಸಿಎಂ ಹುದ್ದೆಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಗಣಿನಗರಿಯ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಗಡಿಗಿ ಚನ್ನಪ್ಪ ವೃತ್ತದ ಬಳಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ. ಎಸ್. ಮಹಮ್ಮದ್ ರಫೀಕ್ ಸೂಚನೆಯ ಮೇರೆಗೆ ನೂರಾರು ಕಾರ್ಯಕರ್ತರು ಜಮಾಯಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಡಿಸಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಆಮಿಷವೊಡ್ಡಿ ಮೈತ್ರಿ ಸರ್ಕಾರ ಬೀಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಾಲಿ ಸಿಎಂ ಬಿ ಎಸ್ ಯಡಿಯೂರಪ್ಪ ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು. ಮೇಲಾಗಿ, ಸಿಎಂ ಬಿಎಸ್ವೈ ಅನರ್ಹ ಶಾಸಕರ ಪರವಾಗಿ ಆಡಿರೋ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಅದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು ಬಿಎಸ್ವೈ ಬೆಂಬಲಕ್ಕೆ ನಿಂತಿರೋದು ನಾಚಿಕೆಗೇಡು ಎಂದು ಛೇಡಿಸಿದರು.
ಸಿಎಂ ಬಿಎಸ್ವೈ ಆಡಿರೋ ಮಾತುಗಳು ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿವೆ. ಅವರು ಒಂದು ಕ್ಷಣವೂ ಕೂಡ ಸಿಎಂ ಆಗಿ ಅಧಿಕಾರದಲ್ಲಿ ಮುಂದುವರಿಯಲೇ ಬಾರದು. ಕೂಡಲೇ ಈ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಯುವಮುಖಂಡರಾದ ವೆಂಕಟೇಶ ಹೆಗ್ಡೆ, ಎಂ. ಪ್ರಭಂಜನ ಕುಮಾರ, ಬಿ. ಎಂ. ಪಾಟೀಲ, ಬೆಣಕಲ್ ಬಸವರಾಜಗೌಡ, ಅಸುಂಡಿ ನಾಗರಾಜಗೌಡ, ಹಿರಿಯ ಮುಖಂಡ ಎಲ್. ಮಾರೆಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಟಿ. ಪದ್ಮಾ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.