ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆಯಲಿ ಕೈ ಬಲಪಡಿಸಿದ್ದಕ್ಕೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು ಧನ್ಯವಾದ ಸಲ್ಲಿಸಿದ್ದಾರೆ.
ಬಳ್ಳಾರಿ ನಗರದ ರಾಯಲ್ ಪೋರ್ಟ್ ಹೋಟೆಲ್ನಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್, ಬಳ್ಳಾರಿಯ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಮಾಜಿ ಶಾಸಕ ಹೆಚ್.ಅನಿಲ್ ಲಾಡ್, ಜಿಲ್ಲಾ ಕಾಂಗ್ರೆಸ್ ಸಮಿತಿಯ (ನಗರ) ಅಧ್ಯಕ್ಷ ಜಿ.ಎಸ್.ಮಹಮ್ಮದ ರಫೀಕ್, ಮುಖಂಡರಾದ ಜೆ.ಎಸ್.ಆಂಜನೇಯಲು, ಕೊಳಗಲ್ಲು ಅಂಜಿನಿ, ಚಿತ್ರದುರ್ಗ ಜಿಲ್ಲೆಯ ಹಾನಗಲ್ ಜಿಲ್ಲಾ ಪಂಚಾಯಿತಿ ಸದಸ್ಯ ಮುಂಡರಗಿ ನಾಗರಾಜ ಸೇರಿದಂತೆ ಮತ್ತಿತರ ಮುಖಂಡರು ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸುವ ಮುಖೇನ ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಬೆಂಬಲಕ್ಕೆ ನಿಂತಿರುವುದಕ್ಕೆ ಬಳ್ಳಾರಿ ಮಹಾನಗರದ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಭಾವಿ ಸಚಿವರೇ ಪ್ರಚಾರ ಕೈಗೊಂಡರೂ ಫಲಿತಾಂಶ ಫಲಿಸಲಿಲ್ಲ:
ರಾಜ್ಯದ ಪ್ರಭಾವಿ ನಾಯಕರೆಂದೇ ಬಿಂಬಿಸಿಕೊಳ್ಳುತ್ತಿರುವ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರೇ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಫೀಲ್ಡ್ಗಿಳಿದಿದ್ದರು. ಆದರೂ ಪ್ರಯೋಜನ ಆಗಲಿಲ್ಲ. ಇಂಥಹ ಪರಿಸ್ಥಿತಿ ಬಿಜೆಪಿಗೆ ಇದೆ ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ತೆರಿಗೆ ವಿನಾಯಿತಿಗೆ ಚಿಂತನೆ:
ನಗರದಲ್ಲಿ ಸದ್ಯ ಜಾರಿಯಲ್ಲಿರುವ ತೆರಿಗೆಗೆ ವಿನಾಯಿತಿ ನೀಡಲು ಚಿಂತನೆ ಮಾಡುವುದಾಗಿ ಶಾಸಕ ಬಿ.ನಾಗೇಂದ್ರ ತಿಳಿಸಿದ್ದಾರೆ. ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಮಾತನಾಡಿ, ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇಷ್ಟೊಂದು ಅಭೂತಪೂರ್ವ ಮೆಜಾರಿಟಿ ಬಂದಿರುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯ ಹಾಗೂ ಬಳ್ಳಾರಿ ಸಮಸ್ಯೆಗಳಿಗೆ ಬೇಸತ್ತು ಈ ಮತದಾರರು ಈ ಫಲಿತಾಂಶ ನೀಡಿದ್ದಾರೆ ಎಂದರು.
ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆಯಾಗಿದೆ. ಈಗ ರಾಜೀನಾಮೆ ನೀಡುತ್ತೀರೋ?:
ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಂದಾಲ್ ಸಮೂಹ ಸಂಸ್ಥೆಗೆ ಅಂದಾಜು 3667 ಎಕರೆ ಭೂಮಿ ಪರಭಾರೆ ವಿಚಾರವಾಗಿ ರಾಜೀನಾಮೆ ನೀಡಿದ್ದರು. ಆದರೆ, ಈಗ ಬಿಜೆಪಿ ಸರ್ಕಾರ ಭೂಮಿ ಪರಭಾರೆ ಮಾಡಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ ಸಿಂಗ್ ಅವರ ನಿಲುವೇನು?. ಭೂಮಿ ಪರಭಾರೆ ವಿಚಾರವಾಗಿ ಸಚಿವ ಆನಂದ ಸಿಂಗ್ ರಾಜೀನಾಮೆ ನೀಡುತ್ತಾರೋ ಎಂದು ಸೈಯದ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಹತಾಶೆ:
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರ ಗೆಲುವಿಗೆ ಜಿಲ್ಲೆಯ ಬಿಜೆಪಿ ನಾಯಕರು, ಸಚಿವರು, ಶಾಸಕರು ಹತಾಶರಾಗಿದ್ದಾರೆ. ಹೀಗಾಗಿ, ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸುವುದು, ಬೆದರಿಸಲು ಮುಂದಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ದೂರಿದ್ದಾರೆ.
ಮಾಜಿ ಶಾಸಕ ಹೆಚ್.ಅನಿಲ್ ಲಾಡ್ ಮಾತನಾಡಿ, ಈ ಚುನಾವಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯಗಳೇ ಕಾಂಗ್ರೆಸ್ ಗೆಲುವಿಗೆ ಕಾರಣ ಎಂದು ಹೇಳಿದರು.