ಬಳ್ಳಾರಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ ರೈತ ಮುಖಂಡರು ಅಣಕು ಶವ ಮೆರವಣಿಗೆ ಮೂಲಕ ನಗರದಲ್ಲಿ ಪ್ರತಿಭಟಿಸಿದ್ದಾರೆ.
ನಗರದಲ್ಲಿ ಅಣಕು ಶವದ ಮೆರವಣಿಗೆಯನ್ನು ಕೈಗೊಂಡ ರೈತರು ನಂತರ ಗಡಗಿ ಚನ್ನಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹೋಗಿ ಪ್ರತಿಭಟಿಸಿದರು. ನಂತರ ರಾಯಲ್ ವೃತ್ತದಲ್ಲಿ ಅಣಕು ಶವಕ್ಕೆ ಪೆಟ್ರೋಲ್ ಹಾಕಿ ಆಕ್ರೋಶ ವ್ಯಕ್ತಪಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ರೈತ ಹೋರಾಟಗಾರ ಮಲ್ಲಿಕಾರ್ಜುನ ರೆಡ್ಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾವು ಏನೇ ಕಾಯ್ದೆ ಜಾರಿ ಮಾಡಿದರೂ ಜನರು ಕೇಳೋಲ್ಲ ಎಂದು ರೈತರ ವಿರೋದಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದ್ದಾರೆ. ಈಗ ಕಾರ್ಪೋರೆಟ್ ಕಾಂಟ್ರಾಕ್ಟ್ ಪದ್ದತಿಯನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರ, ಒಂದು ಊರಿನಲ್ಲಿ ಒಂದು ಎರಡು ಎಕರೆ ಹೊಲ ಗದ್ದೆ ಇರುವ ರೈತರನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ ಎಂದರು.
ನಂತರ ಮಾತನಾಡಿ, ಈ ಕಾಯ್ದೆಗಳ ಜಾರಿಯಿಂದಾಗಿ ನಮ್ಮ ಹೊಲದಲ್ಲಿಯೇ ನಾವು ಗುತ್ತಿಗೆ ತೆಗೆದುಕೊಂಡು ಕೂಲಿಗಳಾಗಿ ದುಡಿಯುವ ಪರಿಸ್ಥಿತಿ ಬರುತ್ತದೆ ಎಂದ ಅವರು, ಇಲ್ಲಿಯವರೆಗೆ ಸ್ವಾಭಿಮಾನಿಯಾಗಿ ಬದುಕುತ್ತಿದ್ದ ರೈತರನ್ನು ಸರ್ಕಾರದ ಗೂಳಿಗಳು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.
ನಂತರ ಹಿರಿಯ ರೈತ ಹೋರಾಟಗಾರರಾದ ಟಿ.ಜಿ ವಿಠಲ್ ಮಾತನಾಡಿ, ವಿಪಕ್ಷಗಳು ಇಲ್ಲದೇ ಏಕ ಪಕ್ಷಿಯವಾಗಿ ಮಸೂದೆಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದಿಕ್ಕಾರ ಎಂದ ಅವರು, ಕೇಂದ್ರ ಸರ್ಕಾರದಲ್ಲಿರುವ ಮಂತ್ರಿಗಳು ದಲ್ಲಾಳಿಗಳಾಗಿ ವ್ಯವಹಾರ ಮಾಡುತ್ತಿದ್ದಾರೆ. ಅವರು ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.