ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರು ಜಿ.ಪಂ ಸಿಇಒ ಕೆ. ನಿತೀಶ್ ಅವರನ್ನು ಭೇಟಿಯಾಗಿ ಬುಡಾ ಅಭಿವೃದ್ಧಿ ಚಟುವಟಿಕೆಗಳ ಕುರಿತು ಚರ್ಚೆ ನಡೆಸಿದರು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ 18 ಗ್ರಾಮಗಳಾದ ಜಾನೆಕುಂಟೆ, ಬೆಳಗಲ್ಲು, ಆಲದಹಳ್ಳಿ, ಕೊಳಗಲ್ಲು, ಹೊನ್ನಳ್ಳಿ, ಮುಂಡ್ರಿಗಿ, ಬಳ್ಳಾರಿ ಕಸಬಾ, ಪತ್ರಬುದಿಹಾಳ್, ಆಂದ್ರಾಳ್, ಬಿ.ಗೋನಾಳ್, ಬಿಸಲಹಳ್ಳಿ, ಬೇವಿನಹಳ್ಳಿ, ಹದ್ದಿನಗುಂಡು, ಸಂಗನಕಲ್ಲು, ಹಲಕುಂದಿ, ಮಿಂಚೇರಿ, ಸಂಜೀವನರಾಯನಕೋಟೆಯ ಇ-ಖಾತೆ ಕೊಡುವಂತೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಕೇಳಿಕೊಂಡರು.
ಅನಧಿಕೃತ ವಸತಿ, ಕೈಗಾರಿಕೆ ಹಾಗೂ ವಾಣಿಜ್ಯ ವಿನ್ಯಾಸಗಳ ನೀಲಿ ನಕ್ಷೆ ನೀಡುವುದಕ್ಕೆ ಸಂಬಂಧಿಸಿದಂತೆ ಜಿ.ಪಂ ಸಿಇಒ ನಿತೀಶ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ದಮ್ಮೂರು ಅವರು, ಈ ವಿಷಯದಲ್ಲಿ ಅಸಹಾಕಾರ ತೋರುತ್ತಿರುವ ಗ್ರಾಮ ಪಂಚಾಯತಿಗಳ ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಸಿಇಒ, ಈ ವಿಷಯಗಳಿಗೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.