ಬಳ್ಳಾರಿ: ತಾಲೂಕಿನ ಎತ್ತಿನಬೂದಿಹಾಳ್ನಲ್ಲಿ ನಿರ್ಮಿಸಿರುವ ಅಂತಾರಾಜ್ಯ ತಾತ್ಕಾಲಿಕ ಚೆಕ್ಪೋಸ್ಟ್ನಲ್ಲಿ ಉರಗ ಕಾಟ. ಮತ್ತೊಂದು ಚೆಕ್ಪೋಸ್ಟ್ನಲ್ಲಿ ಇಲ್ಲಗಳದ್ದೇ ಸಮಸ್ಯೆ!
ನೆರೆಯ ಆಂಧ್ರಪ್ರದೇಶದ ಅನಂತಪುರಂ, ಕರ್ನೂಲ್ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು ಹೆಚ್ಚಾದ ಹಿನ್ನೆಲೆಯಲ್ಲಿ ಗಡಿಭಾಗದ ಹಳ್ಳಿಗಳಿಂದ ಜನ ಗಣಿನಾಡಿಗೆ ಪ್ರವೇಶಿಸುತ್ತಿದ್ದರು. ಅದನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾಡಳಿತ ಎತ್ತಿನಬೂದಿಹಾಳ್ ಗ್ರಾಮದ ಹೊರವಲಯದಲ್ಲಿ ಚೆಕ್ಪೋಸ್ಟ್ ನಿರ್ಮಿಸಿದೆ. ಆದರೆ ಅಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲ.
ಚೆಕ್ಪೋಸ್ಟ್ಗಾಗಿ ನಿರ್ಮಿಸಿರುವ ಶೆಡ್ನಲ್ಲಿ ಕುರ್ಚಿ, ಟೇಬಲ್ ಮಾತ್ರ ಇದೆ. ಮಳೆ ಬಂದರೆ ಚೆಕ್ಪೋಸ್ಟ್ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಪಡಬಾರದ ಕಷ್ಟಪಡುತ್ತಿದ್ದಾರೆ. ಶೆಡ್ ಸೋರುತ್ತದೆ ಹಾಗೂ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಹಾವು-ಚೇಳುಗಳ ಕಾಟ ಹೆಚ್ಚಾಗಿದೆ. ಹೀಗಾಗಿ ಸಿಬ್ಬಂದಿ ಭೀತಿಯಿಂದ ದಿನ ಕಳೆಯುವಂತಾಗಿದೆ.
ಅನುಪಯುಕ್ತ ಚೆಕ್ಪೋಸ್ಟ್: ಈ ತಾತ್ಕಾಲಿಕ ಚೆಕ್ಪೋಸ್ಟ್ ಬಳಿಯೇ ಮತ್ತೊಂದು ಚೆಕ್ಪೋಸ್ಟ್ ಕಟ್ಟಡವಿದೆ. ಆದರೆ, ಅದೀಗ ಸಂಪೂರ್ಣವಾಗಿ ಪಾಳುಬಿದ್ದಿದೆ. ಎರಡು ಕೊಠಡಿಯುಳ್ಳ ಈ ಕಟ್ಟಡದಲ್ಲಿ ಅತ್ಯಾಧುನಿಕ ಸೌಲಭ್ಯ ಇವೆಯಾದರೂ ಬಳಕೆಗೆ ಮಾತ್ರ ಜಿಲ್ಲಾಡಳಿತವಾಗಲೀ ಅಥವಾ ಎತ್ತಿನಬೂದಿಹಾಳ್ ಗ್ರಾಮ ಪಂಚಾಯಿತಿಯಾಗಲೀ ಮುಂದಾಗಿಲ್ಲ.
ಪಾಳು ಬಿದ್ದ ಶೆಡ್ ಅನ್ನು ಸಕ್ರಿಯಗೊಳಿಸಲು ಜಿಲ್ಲಾಡಳಿತ ಕ್ರಮವಹಿಸಬೇಕು. ಅದರಿಂದ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಚೆಕ್ಪೋಸ್ಟ್ನ ಅಧಿಕಾರಿಗಳು ಮನವಿ ಮಾಡಿದ್ದಾರೆ.