ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಯುವಕನೋರ್ವ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ವಂಚನೆ ಮಾಡಿದ ಆರೋಪದಡಿ ಯುವತಿಯೋರ್ವಳು ಪ್ರಿಯಕರನ ಮನೆಯ ಮುಂದೆ ಧರಣಿ ಆರಂಭಿಸಿದ್ದಾಳೆ.
ಸೋಗಿ ಗ್ರಾಮದ ಯುವತಿ ಹಾಗೂ ಹಿರೇಹಡಗಲಿ ಗ್ರಾಮದ ಮನೋಹರ ಎಂಬುವರು ಕಳೆದ 5 ವರ್ಷಗಳಿಂದ ಪ್ರೀತಿಸಿಕೊಂಡಿದ್ದಾರೆ. ಮದುವೆಯಾಗುವುದಾಗಿ ಮೊನ್ನೆಯ ದಿನ ಯುವತಿಯನ್ನು ಮನೋಹರ ಬೆಂಗಳೂರಿಗೆ ಕರೆಸಿಕೊಂಡು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಈಗ ಮನೋಹರ ಪರಾರಿಯಾಗಿದ್ದು ಆತನಿಗಾಗಿ ಧರಣಿ ಮಾಡುತ್ತಿದ್ದೇನೆ ಎಂದು ನೊಂದ ಯುವತಿ ದೂರಿದ್ದಾಳೆ.
ಮನೆಮಂದಿಯನ್ನು ಆತ ತಲೆಮರೆಸಿಕೊಳ್ಳುವಂತೆ ಮಾಡಿ ಪರಾರಿಯಾಗಿದ್ದಾನೆ. ಹೀಗಾಗಿ ಸತತ ಐದು ದಿನಗಳಿಂದ ಪ್ರಿಯಕರನ ಮನೆಮುಂದೆ ಧರಣಿ ಶುರು ಮಾಡಿದ್ದು, ನನಗೆ ಮನೋಹರ ಬೇಕೇಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಶಾಂತಿಯುತ ಪ್ರತಿಭಟನೆಗೆ ಇಳಿದು ಹೋರಾಟ ಮಾಡುತ್ತಿದ್ದಾಳೆ. ತನ್ನ ಮಗಳ ಜೊತೆಗೆ ನ್ಯಾಯಕ್ಕಾಗಿ ಯುವತಿಯ ಚಿಕ್ಕಪ್ಪ ಕೂಡ ಧರಣಿ ನಡೆಸುತ್ತಿದ್ದಾರೆ. ದೈಹಿಕ ಮತ್ತು ಮಾನಸಿಕವಾಗಿ ಬಳಸಿಕೊಂಡು ಅನ್ಯಾಯ ಮಾಡಲಾಗಿದೆ. ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಬೇಕು, ಆ ಯುವಕನೇ ಬಾಳು ಕೊಡಬೇಕು ಎಂದು ಯುವತಿಯ ಚಿಕ್ಕಪ್ಪ ಆಗ್ರಹಿಸಿದ್ದಾರೆ.