ಬಳ್ಳಾರಿ: ಕೊರೊನಾ ಸೋಂಕಿನಿಂದ ಗುಣಮುಖರಾದ ಗಣಿನಾಡು ಬಳ್ಳಾರಿ ಜಿಲ್ಲೆಯ ಮತ್ತಿಬ್ಬರನ್ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿದೆ.
ಜಿಲ್ಲೆಯ ಹೊಸಪೇಟೆಯ ಪಿ-90 ಹಾಗೂ ಬಳ್ಳಾರಿ ನಗರದ ಗುಗ್ಗರಹಟ್ಟಿಯ ಪಿ-151ರ ನಗೆಟಿವ್ ರಿಪೋರ್ಟ್ ಬಂದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಕಳೆದ ಏಪ್ರಿಲ್ 23ರಂದು ಜಿಲ್ಲೆಯ ಹೊಸಪೇಟೆ ಎಸ್.ಆರ್. ನಗರದ ಒಂದೇ ಕುಟುಂಬದ ಮೂವರನ್ನ ಬಿಡುಗಡೆ ಮಾಡಲಾಗಿತ್ತು. ಅದಾದ ಮೂರೇ ದಿನಗಳಲ್ಲಿ ಮತ್ತಿಬ್ಬರನ್ನ ಬಿಡುಗಡೆಗೊಳಿಸಿದೆ. ಜಿಲ್ಲೆಯಲ್ಲಿ ಅಂದಾಜು 13 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದವು. ಆ ಪೈಕಿ ಐವರು ಈ ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ. ಇನ್ನು ಕೇವಲ ಎಂಟು ಪಾಸಿಟಿವ್ ಪ್ರಕರಣಗಳಿದ್ದು, ಜಿಲ್ಲಾ ಸರ್ಕಾರಿ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಪ್ಪಾಳೆ ತಟ್ಟಿ ಬೀಳ್ಕೊಡುಗೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್.ಎಲ್.ಜನಾರ್ದನ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎನ್.ಬಸರೆಡ್ಡಿ ನೇತೃತ್ವದ ಸಿಬ್ಬಂದಿ ಈ ದಿನ ಕೊರೊನಾ ಸೋಂಕಿನಿಂದ ಗುಣಮುಖರಾದ ಇಬ್ಬರಿಗೆ ದಿನಸಿ ಕಿಟ್ ವಿತರಿಸುವ ಮುಖೇನ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು. ಡಿಸಿ ಎಸ್.ಎಸ್.ನಕುಲ್ ಜಿಲ್ಲಾ ಸರ್ಕಾರಿ ಕೋವಿಡ್ -19 ಆಸ್ಪತ್ರೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.