ಬಳ್ಳಾರಿ: ಗಣಿ ಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಖನಿಜ ಪ್ರತಿಷ್ಠಾನದ ಅಡಿಯಲ್ಲಿ ಈ ವರ್ಷ 872 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗಣಿಬಾಧಿತ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆ, ಶುದ್ಧ ಕುಡಿಯುವ ನೀರಿನ ಘಟಕಗಳು ಸೇರಿದಂತೆ ಕುಡಿಯುವ ನೀರಿನ ಯೋಜನೆಗೆ 200 ಕೋಟಿ ರೂ. ಅನ್ನು ಈ ವರ್ಷದ ಜಿಲ್ಲಾ ಖನಿಜ ನಿಧಿಯಡಿ ತೆಗೆದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಂಪಿಯ ವಿರೂಪಾಕ್ಷ ದೇಗುಲದ ಬಳಿ ಹೈಮಾಸ್ಟ್ ದ್ವೀಪ, ಶೌಚಾಲಯ ಮತ್ತು ಸ್ನಾನಗೃಹ ಹಾಗೂ ಇನ್ನಿತರೆ ಸೌಕರ್ಯಗಳ ಕಲ್ಪನೆ, ಹಂಪಿಯ ಪುಷ್ಕರ ಸ್ನಾನಘಟ್ಟ ಬಳಿ ಸೌಕರ್ಯ ಕಲ್ಪಿಸುವಿಕೆಯೂ ಅನುದಾನ ಕಾಯ್ದಿರಿಸಲಾಗಿದ್ದು, ಪ್ರವಾಸೋದ್ಯಮ ಇಲಾಖೆ ಅಥವಾ ಧಾರ್ಮಿಕ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಸ್ವಾಮಿಹಳ್ಳಿ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ, ದರೋಜಿ 10 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ, ಕುಡಿತಿನಿಯಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣ, ಬಳ್ಳಾರಿ ಮಹಾನಗರ ಪಾಲಿಕೆಗೆ ಫಾಗಿಂಗ್ ಮಶಿನ್ ಖರೀದಿ, ಸಂಗನಕಲ್ಲು ಆಸ್ಪತ್ರೆಗೆ ಸೌಕರ್ಯ ಕಲ್ಪಿಸುವಿಕೆ, ಜಿಲ್ಲಾಸ್ಪತ್ರೆಯಲ್ಲಿ ಡ್ರಗ್ ಸ್ಟೋರೆಜ್ ಯುನಿಟ್, ರೂಪನಗುಡಿ ಆಸ್ಪತ್ರೆಗೆ ವೈದ್ಯಕೀಯ ಸಲಕರಣೆಗಳ ಒದಗಿಸುವಿಕೆ, ಕೊಟ್ಟೂರು ಆಸ್ಪತ್ರೆ ಮೇಲ್ದರ್ಜೆಗೇರಿಸುವಿಕೆ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಇಲಾಖೆಗೆ ಸಂಬಂಧಿತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಿಸಿ ವಿವರಿಸಿದರು.
ಡಿಎಂಎಫ್ ಲೋಗೋ ನಾಮಫಲಕ ಅಳವಡಿಸಿ: ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನದ ಮೂಲಕ ಕೈಗೊಂಡ ಕಾಮಗಾರಿಗಳ ಹತ್ತಿರ ಡಿಎಂಎಫ್ ಲೋಗೋ ಮತ್ತು ಅದಕ್ಕೆ ಸಂಬಂಧಿಸಿದ ವಿವರಣೆಯುಳ್ಳ ನಾಮಫಲಕಗಳನ್ನು ಕಡ್ಡಾಯವಾಗಿ ಅಧಿಕಾರಿಗಳು ಅಳವಡಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ನಕುಲ್ ಸೂಚಿಸಿದ್ದಾರೆ.
ಕ್ರಿಯೇಟಿವಿಟಿಯಿಂದ ಕೆಲಸ ಮಾಡಿ: ಕೌಶಲಾಭಿವೃದ್ಧಿ, ಮಹಿಳಾ ಕೌಶಲ ತರಬೇತಿ, ಮಹಿಳಾ ಉದ್ಯಮಶೀಲತಾ ಪಾರ್ಕ್ ಮತ್ತು ವಿವಿಧ ಉದ್ದೇಶಗಳ ಪಾರ್ಕ್‍ಗಳು, ವಿವಿಧ ರೀತಿಯ ತರಬೇತಿಗಳಿಗಾಗಿ ಜಿಲ್ಲಾ ಖನಿಜ ನಿಧಿಯಡಿ ಕಳೆದ ಎರಡು ವರ್ಷಗಳಿಂದ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಹೆಚ್ಚೆಚ್ಚು ಅನುದಾನವನ್ನು ಒದಗಿಸಲಾಗಿದೆ. ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳು ಹೆಚ್ಚೆಚ್ಚು ಮುತುವರ್ಜಿವಹಿಸಿ ಕ್ರಿಯಾತ್ಮಕ ಆಲೋಚನೆಗಳೊಂದಿಗೆ ಕೆಲಸ ಮಾಡುವುದರ ಮೂಲಕ ಜಿಲ್ಲಾಡಳಿತದ ಕನಸನ್ನು ಸಾಕಾರಗೊಳಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಡಿಎಂಎಫ್ ಅಡಿಯ ಅನುದಾನದಡಿ ಇದುವರೆಗೆ ಕೈಗೊಳ್ಳಲಾಗಿರುವ ಕಾಮಗಾರಿಗಳ ಪ್ರಗತಿಯನ್ನು ಜಿಲ್ಲಾಧಿಕಾರಿ ನಕುಲ್ ಪರಿಶೀಲಿಸಿದರು. ಈ ವೇಳೆ ಜಿಪಂ ಸಿಇಒ ಕೆ. ನಿತೀಶ್ ಕುಮಾರ ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.