ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ, ಜಿಲ್ಲೆಯ ನಾನಾ ಭಾಗಗಳಲ್ಲಿ ಭಕ್ತರು ಬನ್ನಿಕಟ್ಟೆಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳ್ಳಾರಿ, ಸಿರುಗುಪ್ಪ ತಾಲೂಕು ಸೇರಿದಂತೆ ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಮಹಿಳೆಯರು ಬೆಳ್ಳಂಬೆಳಗ್ಗೆ ಬಗೆ - ಬಗೆಯ ಖಾದ್ಯಗಳನ್ನು ತಯಾರಿಸಿ ಬನ್ನಿಕಟ್ಟೆಗೆ ವಿಶೇಷ ಪೂಜೆ ಸಲ್ಲಿಸಿದರು.
ಇಲ್ಲಿನ ಬೇವಿನಹಳ್ಳಿ ಗ್ರಾಮದಲ್ಲಿ ಮಹಿಳೆಯರು ತಮ್ಮ ಹೊಲ -ಗದ್ದೆಗಳಲ್ಲಿದ್ದ ಬನ್ನಿಕಟ್ಟೆಗೆ ವಿಶೇಷ ಸಲ್ಲಿಸುವ ಮೂಲಕ ಬನ್ನಿಮರವೊಂದಕ್ಕೆ ಸೀರೆಯನ್ನು ತೊಡಿಸಿನ ಪೂಜೆ ಸಲ್ಲಿಸಿದ್ದಾರೆ/
ಬನ್ನಿ ಮಹಾಕಾಳಿ ತಾಯಿಗೆ ಸಾಂಪ್ರದಾಯಿಕವಾಗಿ ಎರಡು ಒಣ ಕೊಬ್ಬರಿ, ಬಟ್ಟಲು, ಎಲೆ - ಅಡಿಕೆ, ಅರಿಶಿಣ, ಕುಂಕುಮ ಹಾಗೂ ಅಕ್ಕಿಯಿಂದ ಉಡಿ ತುಂಬಿದರು.
ಕೆಲವರು ಬನ್ನಿಮರಕ್ಕೆ ಸೀರೆಯನ್ನು ಉಡಿಸಿದರೆ ಇನ್ನೂ ಕೆಲವರು ಬನ್ನಿಮರದ ಮೇಲಿಟ್ಟು ವಾಪಾಸ್ ತಂದರು. ಬನ್ನಿಮರದಿಂದ ಸೀರೆಯನ್ನು ತಮ್ಮ ಮನೆಗೆ ತಂದು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸುವ ವಾಡಿಕೆ ನಡೆದುಕೊಂಡು ಬಂದಿದೆ.
ನವರಾತ್ರಿ ಆರಂಭವಾದ ದಿನದಿಂದ ಜಿಲ್ಲೆಯ ನಾನಾ ಭಾಗಗಳಲ್ಲಿ ದೇವಿ ಪುರಾಣದ ಪಾರಾಯಣ ನಡೆಯುತ್ತದೆ ಜೊತೆಗೆ ಇಂದು ರಾತ್ರಿ ಕೂಡ ಪುರಾಣ ಪಾರಾಯಣದ ಮಹಾಮಂಗಳೋತ್ಸವ ನಡೆಯಲಿದೆ. ಬಳಿಕ ಬನ್ನಿಕಟ್ಟೆಗೆ ವಿಶೇಷಪೂಜೆ ಸಲ್ಲಿಸುವ ಮೂಲಕ ಸಾಮೂಹಿಕವಾಗಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ.
ನಾಳೆ ದಿನವು ಬನ್ನಿ ತಂಗೊಂಡು ಬಂಗಾರದಾಂಗೆ ಇರು ಎಂದು ಪರಸ್ಪರ ಶುಭ ಹಾರೈಸುವ ಮೂಲಕ ಪರಸ್ಪರ ಬನ್ನಿಪತ್ರೆ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ.