ಬಳ್ಳಾರಿ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದ ಚಿನ್ನಹಗರಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದ ಸ್ಥಳದಲ್ಲಿ ಕಾರ್ಮಿಕರಿಗೆ ಕೊರೊನಾ ನಿಯಂತ್ರಣ ಕುರಿತು ಗ್ರಾಪಂ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಮಂಗಳವಾರ ಜಾಗೃತಿ ಮೂಡಿಸಿ, ಪ್ರತಿಜ್ಞಾವಿಧಿ ಬೋಧಿಸಿದರು.
ತಾಪಂ ಸದಸ್ಯ ಜಿ.ಪಾಪನಾಯಕ, ಗ್ರಾಪಂ ಅಧ್ಯಕ್ಷ ಪಾಲನಾಯಕನಕೋಟೆ ಮಂಜುನಾಥ ಮಾತನಾಡಿ, ಕೊರೊನಾ ವೈರಸ್ ಹರಡದಂತೆ ತಡೆಯಲು ಎಲ್ಲರೂ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ತೊಡಗುವ ಕಾರ್ಮಿಕರು ಸಹ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮುಖಕ್ಕೆ ಮಾಸ್ಕ್ ಧರಿಸಬೇಕು, ಸ್ವಚ್ಛವಾಗಿ ಕೈಗಳನ್ನು ಆಗಾಗ ತೊಳೆದುಕೊಳ್ಳಬೇಕು, ಕಾಮಗಾರಿ ಮುಗಿಸಿ ಮನೆಗೆ ವಾಪಸ್ ಬಂದಾಗಲೂ ಕೈ, ಕಾಲುಗಳನ್ನು ಸೋಪಿನಿಂದ ತೊಳೆದುಕೊಳ್ಳಬೇಕು ಎಂದರು.
ಕಾರ್ಮಿಕರಿಗೆ ಕೊರೊನಾ ನಿಯಂತ್ರಣ ಕುರಿತ ಪ್ರತಿಜ್ಞಾವಿಧಿಯನ್ನು ಹುಡೇಂ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಪ್ರೇಮಾ ಬೋಧಿಸಿದರು. ಈ ಸಂದರ್ಭದಲ್ಲಿ ಕರುನಾಡು ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಹುಡೇಂ ಕೃಷ್ಣಮೂರ್ತಿ, ಗ್ರಾಪಂ ಬಿಲ್ ಕಲೆಕ್ಟರ್ ತಿಪ್ಪೇರುದ್ರಪ್ಪ, ಆಶಾ ಕಾರ್ಯಕರ್ತೆಯರಾದ ಕರಿಬಸಮ್ಮ, ನಾಗಮ್ಮ ಇತರರಿದ್ದರು.