ಬಳ್ಳಾರಿ: ಜನರ ಆರೋಗ್ಯದ ಕುರಿತು ಕಾಳಜಿ ಇಲ್ಲದ ಸರ್ಕಾರ, ಸರ್ಕಾರದಲ್ಲಿ ಇರುವ ಸಚಿವರು, ಬರೀ ಹೆಸರಿಗೆ ಮಂತ್ರಿ ಸ್ಥಾನಕ್ಕಾಗಿ, ಡಿಸಿಎಂ ಸ್ಥಾನಗಳಿಗೆ ಮೊರೆ ಹೋಗುತ್ತಿದ್ದು, ಇದು ವಿಪರ್ಯಾಸ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಕಿಡಿಕಾರಿದ್ದಾರೆ.
ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದ ದಿನದಿಂದ ಪ್ರತಿನಿತ್ಯ ಆಶಾ ಕಾರ್ಯಕರ್ತೆಯರು ವಿಭಿನ್ನವಾಗಿ ಪ್ರತಿಭಟನೆ ಮಾಡಿ ಸಚಿವರಿಗೆ ಮನವಿ ಪತ್ರ ಸಲ್ಲಿಸುತ್ತೇವೆ ಎಂದರು.
ಬಹಳ ಕಷ್ಟಪಟ್ಟು ಕೊರೊನಾ ವೈರಸ್ ಮುಂಜಾಗ್ರತೆಯಿಂದ ಸಮಾಜದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ಕಡೆಯಿಂದ ಅವರಿಗೆ 12 ಸಾವಿರ ರೂ. ವೇತನ ನಿಗದಿ ಮಾಡಬೇಕು ಎಂದು ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಕಳೆದ ಜುಲೈ ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ಸಂಬಳವಿಲ್ಲ. ಹಾಗಾದ್ರೆ ಅವರು ಜೀವನ ಮಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದರು. ಇದರಿಂದಾಗಿ ಕರ್ನಾಟಕದಲ್ಲಿ ಇಂದು ಸರ್ಕಾರ ಆಡಳಿತದಲ್ಲಿ ಇದೆಯೋ ಅಥವಾ ಇಲ್ಲವೋ ಎನ್ನುವ ಅನುಮಾನ ಕಾಡುತ್ತಿದೆ ಎಂದರು.
![asha-karyakarthes-pressmeet](https://etvbharatimages.akamaized.net/etvbharat/prod-images/kn-01-bly-180720-ashaworker-pressmeet-news-video-ka10007_18092020124526_1809f_00844_793.jpg)
ಪ್ರಸ್ತುತ ಜನರ ಆರೋಗ್ಯಕ್ಕೆ ವೈದ್ಯರು ಮುಖ್ಯವಾಗಿದ್ದಾರೆ. ಆದರೆ ಅವರೇ ಇಂದು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಸಹ ಪ್ರತಿಭಟನೆ ಮಾಡುವ ಪರಿಸ್ಥಿತಿ ಬರುತ್ತದೆ ಎಂದರು.
![asha-karyakarthes-pressmeet](https://etvbharatimages.akamaized.net/etvbharat/prod-images/kn-01-bly-180720-ashaworker-pressmeet-news-video-ka10007_18092020124526_1809f_00844_279.jpg)
ಆಶಾ ಕಾರ್ಯಕರ್ತೆಯರ ಸಂಘದ ಶಾಂತ, ರೇಷ್ಮಾ, ದೇವದಾಸ್, ರಾಮಕ್ಕ ಹಾಗೂ ಇನ್ನಿತರು ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತರ ಹಕ್ಕೊತ್ತಾಯಗಳು:
- ಪ್ರೋತ್ಸಾಹ ಧನ ಮತ್ತು ಗೌರವಧನ ಎರಡನ್ನು ಒಟ್ಟಿಗೆ ಸೇರಿಸಿ ಮಾಸಿಕ 12 ಸಾವಿರ ರೂ. ಗೌರವಧನ ನೀಡಿ.
- ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಪ್ರೋತ್ಸಾಹಧನ ಒದಗಿಸಬೇಕು.
- ಕೊರೊನಾ ವೈರಸ್ ಪಾಸಿಟಿವ್ ಬಂದರೆ ಉಚಿತ ಚಿಕಿತ್ಸೆ ಜೊತೆಗೆ ಚಿಕಿತ್ಸೆಯ ಅವಧಿಯಲ್ಲಿ 3 ಸಾವಿರ ಗೌರವಧನ ನೀಡಬೇಕು.