ಬಳ್ಳಾರಿ : 370 ನೇ ವಿಧಿ ರದ್ದುಗೊಳಿಸುವುದು ಬಿಜೆಪಿಯವರ ಹಿಡನ್ ಅಜೆಂಡಾ ಆಗಿತ್ತು. ಜೊತೆಗೆ ರಾಮಮಂದಿರ, ಗೋಹತ್ಯೆ ಸೇರಿದಂತೆ ಇನ್ನಿತರ ಹಿಡನ್ ಅಜಂಡಾಗಳಿವೆ ಎಂದು ಬಳ್ಳಾರಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಟೀಕಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ವಿ.ಎಸ್.ಉಗ್ರಪ್ಪ, ಕಳೆದ ಸರ್ಕಾರದ ಅವಧಿಯಲ್ಲಿ ಯಾಕೆ 370 ವಿಧಿ ರದ್ದುಗೊಳಿಸಲಿಲ್ಲ. ಇದು ಐತಿಹಾಸಿಕ ಘಟನೆ. ಆದರೆ ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಅವಸರವಾಗಿ ಮಾಜಿ ಸಿಎಂಗಳನ್ನ ಗೃಹ ಬಂಧನದಲ್ಲಿಟ್ಟು ಆರ್ಟಿಕಲ್ 370 ರದ್ದುಗೊಳಿಸಿದ್ದು ಸರಿಯಲ್ಲ ಎಂದು ಕಿಡಿಕಾರಿದರು.
ಇದು ಸೂಕ್ಷ್ಮ ವಿಚಾರ, ನಾಗರಿಕರಿಗೆ, ಸೈನಿಕರಿಗೆ ರಕ್ಷಣೆ ನೀಡಿ, ದೇಶಕ್ಕೆ ಒಳ್ಳೆಯದಾದರೆ ಮೋದಿಯವರ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂ.ಡಿ ರಫಿಕ್ , ವೆಂಕಟೇಶ ಹೆಗಡೆ, ಆಯಾಜ್ , ಎರಕುಲಸ್ವಾಮಿ, ಕುಮಾರಮ್ಮ, ಮಹೇಶ್ವರಿ ಪಾಟೀಲ್, ಹನುಮಕಿಶೋರ್ , ಜೆ.ಬಿ ಮಂಜುನಾಥ, ಲಕ್ಷ್ಮಣ, ಲೋಕೇಶ್ ಭಾಗಿಯಾಗಿದ್ದರು.
ಯಡಿಯೂರಪ್ಪ ಸರ್ಕಾರ ಬಲವಂತದ ಮದುವೆ : ವಿ.ಎಸ್ ಉಗ್ರಪ್ಪ
ರಾಜ್ಯದಲ್ಲಿ ಒಂದು ಕಡೆ ಪ್ರವಾಹ, ಮತ್ತೊಂದು ಕಡೆ ಬರಗಾಲ ಇದೆ. ರಾಜ್ಯದ ಅನೇಕ ಭಾಗಗಳಲ್ಲಿ ಜನ, ಜಾನುವಾರಗಳು ಸಂಕಷ್ಟಕ್ಕೆ ಸಿಲುಕಿವೆ. ರಾಜ್ಯದಲ್ಲಿ ಸಚಿವರಿಲ್ಲ, ಉಸ್ತುವಾರಿ ಕಾರ್ಯದರ್ಶಿಗಳಿಲ್ಲ , ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರ ಜೀವಂತವಾಗಿಲ್ಲ. ಯಡಿಯೂರಪ್ಪ ಸರ್ಕಾರ ಬಲವಂತದ ಮದುವೆಯಂತಾಗಿದೆ ಎಂದು ವ್ಯಂಗ್ಯವಾಡಿದರು.
ನೂತನ ಸರ್ಕಾರ ರಚನೆಯಾಗಿ 12 ದಿನಗಳು ಕಳೆದಿವೆ. ಇದುವರೆಗೂ ಸಚಿವ ಸಂಪುಟ ವಿಸ್ತರಣೆ ಇಲ್ಲ. ರಾಜ್ಯಪಾಲರು ದೋಸ್ತಿ ಸರ್ಕಾರ ಬಹುಮತ ಸಾಬೀತು ಪಡಿಸಲು ಪತ್ರಗಳ ಮೇಲೆ ಪತ್ರ ಬರೆದರು. ಈಗ ಯಾಕೆ ಮೌನವಾಗಿದ್ದಾರೆ. ಯಡಿಯೂರಪ್ಪ ಗೋಲ್ಡ್ ರಿಚ್ ನಂತಹ ಏಕಪಕ್ಷೀಯ ನಿರ್ಧಾರ ತೆಗದುಕೊಳ್ಳುವ ಸಿಎಂ ಆಗಿದ್ದಾರಾ ಎಂದು ಪ್ರಶ್ನೆ ಮಾಡಿದರು.
ಮೋದಿಗೆ ಉಗ್ರಪ್ಪ ಮನವಿ :
ಸರ್ವೆ ಮಾಡಿಸಿ, 26 ಜನ ನಿಮ್ಮ ಪಕ್ಷದ ಸಂಸತ್ ಸದಸ್ಯರಿದ್ದಾರಲ್ಲಾ ? ಕರ್ನಾಟಕ ರಾಜ್ಯ ವಿಸಿಟ್ ಮಾಡಲಿ, ಕನಿಷ್ಠ 5 ಸಾವಿರ ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದರು. ಸಿಎಂ ಯಡಿಯೂರಪ್ಪ ಭೇಟಿಗೆ ಪ್ರಧಾನಿ ಮೋದಿ ಅವಕಾಶ ಕಲ್ಪಿಸದಿರುವುದು ಕನ್ನಡ ನಾಡಿನ ಜನತೆಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಎಂ ಹುದ್ದೆ ಆಕಾಂಕ್ಷಿಗಳಿದ್ದಾರೆ :
ಬಳ್ಳಾರಿ ಜಿಲ್ಲೆಯಿಂದ ಡಿಸಿಎಂ ಹುದ್ದೆ ಆಕಾಂಕ್ಷಿಗಳಿದ್ದಾರೆ. ಪಾಪ, ಅವರು ಬಳ್ಳಾರಿ ಜನರ ಸಮಸ್ಯೆ ಪರಿಹಾರ ಮಾಡಲಿ ಎಂದು ಪರೋಕ್ಷವಾಗಿ ಶ್ರೀರಾಮುಲುಗೆ ಟಾಂಗ್ ನೀಡಿದರು.