ಬಳ್ಳಾರಿ: ಗ್ರಾಮೀಣ ಭಾಗಗಳಿಂದ ಬಳ್ಳಾರಿಗೆ ಬರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಮತ್ತು ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಪದವೀಧರರ ವೇದಿಕೆಯಿಂದ ಅಪರ ಜಿಲ್ಲಾಧಿಕಾರಿ ಎಸ್. ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಕೆ. ಹಾಳ್ ಗೋವರ್ಧನ್, ಜಿಲ್ಲೆಯ ಮೋಕಾ ಹಾಗೂ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಿಂದ ಉನ್ನತ ವ್ಯಾಸಂಗಕ್ಕಾಗಿ ನಿತ್ಯ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬಳ್ಳಾರಿಗೆ ಬಸ್ನಲ್ಲಿ ಸಂಚಾರ ಮಾಡುತ್ತಿದ್ದಾರೆ. ಆದರೆ, ನಿಗದಿತ ವೇಳೆಗೆ ಬಸ್ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅವರಿಂದ ಯಾವುದೇ ಉಪಯೋಗವಾಗಿಲ್ಲ.
ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿರುವುದರಿಂದ ಇನ್ನೂ ಹೆಚ್ಚುವರಿ ಬಸ್ಗಳನ್ನು ಈ ಮೇಲ್ಕಂಡ ಮಾರ್ಗಗಳಲ್ಲಿ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಹೇಳಿದರು.