ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ಹೊಸ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಪ್ರಸ್ತುತ ಆಕ್ಟೀವ್ ಸೋಂಕಿತರ ಸಂಖ್ಯೆ ಆರಕ್ಕೆ ಏರಿದೆ.
ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಈ ಹಿಂದೆ 13 ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದವು. ಆ ಪೈಕಿ ಎಂಟು ಮಂದಿ ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಇದೀಗ ಹೊಸದೊಂದು ಕೇಸ್ ಪತ್ತೆಯಾಗಿದ್ದರಿಂದ ಪಾಸಿಟಿವ್ ಕೇಸ್ಗಳ ಸಂಖ್ಯೆ 5ರಿಂದ ಆರಕ್ಕೇರಿದೆ. ಉತ್ತರಾಖಂಡ್ ರಾಜ್ಯಕ್ಕೆ ತೀರ್ಥಯಾತ್ರೆಗೆ ಬಳ್ಳಾರಿ ನಗರದ 14 ಮಂದಿ ಹಾಗೂ ನೆರೆಯ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕಣೇಕಲ್ ಮೂಲದ ನಾಲ್ವರು ಸೇರಿದಂತೆ 18 ಮಂದಿ ಲಾಕ್ಡೌನ್ಗಿಂತಲೂ (ಮಾರ್ಚ್ 16) ಹಿಂದೆ ತೆರಳಿದ್ದರು. ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಉತ್ತರಾಖಂಡ್ನ ಲುಡ್ಕಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಅಲ್ಲಿನ ಜಿಲ್ಲಾಧಿಕಾರಿಯವರ ಅನುಮತಿ ಪಡೆದು ಗಣಿನಾಡು ಬಳ್ಳಾರಿ ಜಿಲ್ಲೆಗೆ ಉತ್ತರಾಖಂಡ್ ರಾಜ್ಯದ ಬಸ್ನಲ್ಲಿ ಕಳಿಸಿಕೊಡಲಾಗಿತ್ತು. ಆದರೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಬಳ್ಳಾರಿ ಜಿಲ್ಲಾಡಳಿತ, ಅವರೆಲ್ಲರ ಗಂಟಲು ದ್ರವ ಕಲೆಕ್ಟ್ ಮಾಡಿ ಕೈಗೆ ಸೀಲ್ ಹಾಕಿ ಹೋಂ ಕ್ವಾರಂಟೈನ್ಗೆ ಸೂಚಿಸಿತ್ತು. ನಿನ್ನೆ ತಪಾಸಣೆಗೆ ಒಳಪಡಿಸಿದಾಗ ಓರ್ವರಿಗೆ ಮಾತ್ರ ಪಾಸಿಟಿವ್ ಅಂತಾ ಬಂದಿದೆ. ಉಳಿದ 17 ಮಂದಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಬಳ್ಳಾರಿಯಲ್ಲಿಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂತರ್ ರಾಜ್ಯಗಳಿಂದ ಯಾರೇ ಬಂದರೂ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್: ಇನ್ಮುಂದೆ ನೆರೆಯ ಆಂಧ್ರ ಪ್ರದೇಶ ರಾಜ್ಯದಿಂದ ಯಾರೇ ಬಂದ್ರೂ ಕೂಡ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತೆ. ವಿಮ್ಸ್, ತಾರಾನಾಥ ಆರ್ಯುವೇದ ಕಾಲೇಜು ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಬಂದ್ರೂ ಕೂಡ ಈ ಕ್ವಾರಂಟೈನ್ ಕಡ್ಡಾಯ. ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ನೆರೆಯ ಆಂಧ್ರ ಪ್ರದೇಶದ ಗಡಿಭಾಗದವರು ಅಕಸ್ಮಾತ್ತಾಗಿ ಯಾರಾದ್ರೂ ಸಾವನ್ನಪ್ಪಿದ್ರೂ ಕೂಡ ಅವರ ಶವಸಂಸ್ಕಾರ ಪೂರೈಸಿಕೊಂಡು ಬಂದು 14 ದಿನಗಳ ಕಾಲ ನಮ್ಮಲ್ಲಿ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತೆ ಎಂದು ಡಿಸಿ ನಕುಲ್ ಹೇಳಿದ್ದಾರೆ.