ಹೊಸಪೇಟೆ : ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷರಾಗಿ ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವಿರೋಧ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ಮಾತನಾಡಿ, ಬಿಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಸಿಂಗ್ ಅವರು ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹಾಗಾಗಿ, ಉಳಿದ ಅವಧಿಗೆ ಆನಂದ್ ಸಿಂಗ್ ಅವರು ಅವಿರೋಧ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಎಂದು ಘೋಷಿಸಿದರು. ಇದೇ ಸಂದರ್ಭದಲ್ಲಿ ಆನಂದ್ ಸಿಂಗ್ ಅವರನ್ನು ಬ್ಯಾಂಕಿನ ಉಪಾಧ್ಯಕ್ಷರು ಸನ್ಮಾನಿಸಿದರು.
ಬಳಿಕ ಮಾತನಾಡಿದ ಸಚಿವ ಆನಂದ್ ಸಿಂಗ್, ಬಿಡಿಸಿಸಿ ಬ್ಯಾಂಕ್ನ ನಿರ್ದೇಶಕರ ಸಹಕಾರದಿಂದ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದೇನೆ. ಬಿಡಿಸಿಸಿ ಬ್ಯಾಂಕ್ನಲ್ಲಿ ಮೊದಲಿಂದು ಅವಿರೋಧ ಆಯ್ಕೆ ಮಾಡಿಕೊಂಡು ಬರಲಾಗುತ್ತಿದೆ. ಚುನಾವಣೆ ನಡೆಯುವುದು ಕಮ್ಮಿ ಎಂದರು.
ರಾಜಕೀಯದಲ್ಲಿ ಸಡನ್, ಬ್ರೇಕಿಂಗ್ ಯಾವುದು ಇರುವುದಿಲ್ಲ. ಕಾಲ ಕೂಡಿ ಬಂದಾಗ ಕೆಲಸಗಳು ಆಗುತ್ತವೆ. ಸಹಕಾರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅವಕಾಶ ಸಿಕ್ಕಿದೆ. ಯಾವುದೇ ಯೋಜನೆ ಮಾಡಿಕೊಂಡಿಲ್ಲ. ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು, ಬೇರೆಯವರಿಗೂ ಸಹ ಅನುಕೂಲ ಮಾಡಿ ಕೊಡೋಣ.
ಸಹಕಾರ ಕ್ಷೇತ್ರಕ್ಕೆ ಬಂದಿರುವುದು ರಾಜಕೀಯ ಉದ್ದೇಶದಿಂದಲ್ಲ. ಇದರಲ್ಲಿ ಮೇಲು, ಕೀಳು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬ್ಯಾಂಕಿನ ನಿರ್ದೇಶಕರಾದ ಭರತ್ ರೆಡ್ಡಿ ಹಾಗೂ ಭೋಗಾ ರೆಡ್ಡಿ ಅವರು ಚುನಾವಣೆಯಲ್ಲಿ ಗೈರಾಗಿದ್ದರು.