ಬಳ್ಳಾರಿ : ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಯ ಅಧಿಕೃತ ಘೋಷಣೆ ಮಾಡಿದ ಹಿನ್ನೆಲೆ ಇಂದು ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಮುಖಂಡರು ಕರಾಳ ದಿನಾಚರಣೆಗೆ ಯತ್ನಿಸಿದರು. ಗಡಿಗಿ ಚನ್ನಪ್ಪ ವೃತ್ತದ ಬಳಿ ಪ್ರತಿಭಟನೆಗೆ ಮುಂದಾದ ಮುಖಂಡರನ್ನ ಬಳ್ಳಾರಿ ಪೊಲೀಸರು ತಡೆದರು.
ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಮುಖಂಡ ಕುಡಿತಿನಿ ಶ್ರೀನಿವಾಸ, ದರೂರು ಪುರುಷೋತ್ತಮಗೌಡ, ಸಿಂಗಾಪೂರ ನಾಗರಾಜ, ಪಿ.ಬಂಡೇಗೌಡ, ಸಿದ್ಮಲ್ ಮಂಜುನಾಥ ನೇತೃತ್ವದಲ್ಲಿ ಕಾರ್ಯಕರ್ತರು ಗಡಿಗಿ ಚನ್ನಪ್ಪ ವೃತ್ತದ ಬಳಿ ಟೈಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲು ಮುಂದಾದಾಗ, ಬಳ್ಳಾರಿ ಗಾಂಧಿನಗರ ಠಾಣೆಯ ಪೊಲೀಸರು ತಡೆದಿದ್ದಾರೆ.
ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಡು ರಸ್ತೆಗಿಳಿದು ಪ್ರತಿಭಟನೆ ಮಾಡೋದು ಬೇಡ. ನೀವು ಏನೇಯಿದ್ದರೂ, ರಸ್ತೆಯ ಪಕ್ಕದಲ್ಲೇ ಪ್ರತಿಭಟನೆ ಮಾಡಿ ಎಂದಾಗ, ಮುಖಂಡ ಕುಡಿತಿನಿ ಶ್ರೀನಿವಾಸ ಅವರು, ಈಗ ನಿಮಗೊಂದು ಕಾಲ ಬಂದಿದೆ. ಮುಂದೆ ನಮಗೊಂದು ಕಾಲ ಬಂದೇ ಬರುತ್ತದೆ. ಆಗ ನಾನೂ ನೋಡಿಕೊಳ್ಳುವೆ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು.