ಬಳ್ಳಾರಿ: ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳು ತಮ್ಮ 2, 4, 6ನೇ ಸೆಮಿಸ್ಟರ್ ಪರೀಕ್ಷಾ ಶುಲ್ಕ ಕಟ್ಟಬೇಕು ಎಂಬ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ಒತ್ತಾಯಿಸಿದೆ.
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಸಂಘಟನೆಯ ಪ್ರಮುಖರು ಪರೀಕ್ಷಾಂಗ ಕುಲಸಚಿವ ಪ್ರೊ. ರಮೇಶ್ ಹಾಗೂ ಕುಲಪತಿ ಪ್ರೊ. ಸಿದ್ದು ಪಿ. ಅಲಬೂರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿಗಳು, ಸರ್ಕಾರಕ್ಕೆ ನಿಮ್ಮ ಬೇಡಿಕೆ ಶುಲ್ಕ ರದ್ದುಗೊಳಿಸುವ ಬಗ್ಗೆ ಪತ್ರ ಬರೆಯುತ್ತೇವೆ. ವಿದ್ಯಾರ್ಥಿಗಳ ಪರವಾಗಿ ಸರ್ಕಾರಕ್ಕೆ ನೀವು ಬೇಡಿಕೆ ಸಲ್ಲಿಸಿದ್ದೀರಿ. ಇದನ್ನು ಸರ್ಕಾರವೇ ನಿರ್ಧರಿಸಬೇಕಿದೆ. ಕುಲಸಚಿವರು ಶುಲ್ಕ ಕಟ್ಟಲು ನಿಗದಿ ಮಾಡಿದ ಕೊನೆಯ ದಿನಾಂಕವನ್ನು ತೆಗೆಯುತ್ತೇವೆ. ಪರೀಕ್ಷೆಯ ಬಗ್ಗೆ ಸರ್ಕಾರದ ನಿರ್ಧಾರ ಪ್ರಕಟಗೊಂಡ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಸಂಘಟನೆಯದ ಜಿಲ್ಲಾ ಅಧ್ಯಕ್ಷ ಜಿ. ಸುರೇಶ್, ಉಪಾಧ್ಯಕ್ಷ ಗುರಳ್ಳಿ ರಾಜ, ಜಿಲ್ಲಾ ಕಾರ್ಯದರ್ಶಿ ರವಿಕಿರಣ್ ಜೆ.ಪಿ ಹಾಗೂ ಜಿಲ್ಲಾ ಸದಸ್ಯರಾದ ಸಂಡೂರು ಮಂಜುನಾಥ್, ಜಡೆಮ್ಮ ಇದ್ದರು.