ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕಲ್ಲುಕಂಭ ಗ್ರಾಮ ಹೊರವಲಯದ ಸವಳು ಭೂಮಿಯಲ್ಲಿ ಎರಿತಾತ ಆಗ್ರೋ ನರ್ಸರಿಯೊಂದು ತಲೆಎತ್ತಿದೆ. ಅಂದಾಜು 6.5 ಎಕರೆಯಲ್ಲಿ ಸಿಜೆಂಟಾ ಸೇರಿದಂತೆ ನಾನಾ ತಳಿಗಳ ಮೆಣಸಿನಕಾಯಿ ಸಸಿಗಳನ್ನು ಬೆಳೆಯಲಾಗುತ್ತದೆ. ಹಾಗೆಯೇ ಸುಮಾರು 1200 ಎಕರೆ ಜಮೀನಿಗೆ ಬೇಕಾದ ಸಸಿಗಳನ್ನ ಪೂರೈಕೆ ಮಾಡಲಾಗುತ್ತೆ. ಇದಲ್ಲದೇ, 450 ಮಂದಿ ರೈತರಿಗೆ ಈ ನರ್ಸರಿಯಿಂದ ಸಹಾಯ ಆಗಲಿದೆ.
2002 ನೇ ಇಸವಿಯಲ್ಲಿ ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ ಪದವಿ ಪೂರೈಸಿದ ಜಿ.ಯರಿಸ್ವಾಮಿಗೌಡ ಮೂಲತಃ ಗುತ್ತಿಗೆದಾರರಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಆಸಕ್ತಿ ಹೊಂದಿದ್ದರು. ಕಳೆದ ಲಾಕ್ ಡೌನ್ ಸಮಯದಲ್ಲಿ ಈ ನರ್ಸರಿ ಆರಂಭಿಸಿದ್ದು, ಈವರೆಗೂ ಅಂದಾಜು 8 ರಿಂದ 10 ಲಕ್ಷ ರೂ.ವರೆಗೂ ವ್ಯಯ ಮಾಡಿದ್ದಾರೆ.
ಎರಿತಾತ ಆಗ್ರೋ ನರ್ಸರಿ ಸ್ಥಾಪನೆಗೆ ಹಣ ವ್ಯಯ ಮಾಡಿದ್ದು ಎಂಬಿಎ ಪದವೀಧರ ಜಿ.ಯರಿಸ್ವಾಮಿ ಅವರಾದ್ರೆ, ಅದನ್ನ ಮುನ್ನಡೆಸಿಕೊಂಡು ಸಕಾಲದಲ್ಲಿ ರೈತರಿಗೆ ಸಸಿಗಳನ್ನ ಪೂರೈಕೆ ಮಾಡೋದು ಮಾತ್ರ ಆ ನರ್ಸರಿಯಲ್ಲಿನ ಪದವೀಧರ ವಿದ್ಯಾರ್ಥಿಗಳು. ಯಾರೇ ರೈತರು ಈ ನರ್ಸರಿಗೆ ಬಂದು ಮೆಣಸಿನಕಾಯಿ ಬೀಜದ ಬಾಕ್ಸ್ ನೀಡಿದ್ರೆ ಸಾಕು. ಅದನ್ನ ಹಗಲು- ರಾತ್ರಿಯೆನ್ನದೇ ಅಚ್ಚುಕಟ್ಟಾಗಿ ಬೆಳೆಸಿ ರೈತರಿಗೆ ಸುರಕ್ಷಿತವಾಗಿ ತಲುಪಿಸೋ ಜವಾಬ್ದಾರಿಯನ್ನ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಹಿನ್ನಲೆಯಲ್ಲಿ ಶಾಲಾ- ಕಾಲೇಜಿಗೆ ರಜೆ ಇರೋದರಿಂದಲೇ ಪದವೀಧರ - ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು ಈ ನರ್ಸರಿಯಲ್ಲಿ ಕೆಲಸ ಮಾಡಿ ಕೈತುಂಬಾ ಸಂಪಾದನೆ ಮಾಡುತ್ತಲೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.