ಬಳ್ಳಾರಿ: ತೊದಲುತ್ತಲೇ ಮಾತನಾಡುವ ಮುಗ್ಧ ಬಾಲಕ ಹೆತ್ತತಾಯಿಯನ್ನು ನನ್ನ ತಂದೆಯೇ ಕೊಲೆಗೈದಿದ್ದಾನೆ ಎಂದು ಹೇಳಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಘಟನೆಯ ವಿವರ...
ಜಿಲ್ಲೆಯ ಸಂಡೂರು ತಾಲೂಕಿನ ಹೀರೆಕೇರನಹಳ್ಳಿ ಗ್ರಾಮದ ಸಾವಿತ್ರಮ್ಮನನ್ನು ಅದೇ ಗ್ರಾಮದ ಓಬಳೇಶ್ ಎಂಬುವರಿಗೆ ಕಳೆದ ಎಂಟು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಎರಡು ಮೂರು ವರ್ಷ ಚೆನ್ನಾಗಿದ್ದ ದಂಪತಿಗೆ ಮೂರು ಮಕ್ಕಳಿವೆ. ಓಬಳೇಶ್ ಕುಟುಂಬಸ್ಥರು ವರದಕ್ಷಿಣೆಗಾಗಿ ಸಾವಿತ್ರಮ್ಮಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗ್ತಿದೆ.
ವರದಕ್ಷಿಣೆ ಹಣ ನೀಡದ ಕಾರಣ ಮೇ 14 ರಂದು ಸಾವಿತ್ರಮ್ಮನನ್ನು ಕೊಲೆಗೈದು ಅಸಹಜ ಸಾವು ಎಂದು ಬಿಂಬಿಸಲು ಹೋಗಿದ್ದಾರೆ. ಆದ್ರೆ ಆಕೆಯ ಪೋಷಕರು ನೀಡಿದ ದೂರಿನ ಪರಿಣಾಮ ಗಂಡ ಓಬಳೇಶನನ್ನು ಪೊಲೀಸರು ಬಂಧಿಸಿದ್ದಾರೆ.
ನೊಂದ ಸಾವಿತ್ರಮ್ಮ ಕುಟುಂಬಸ್ಥರು ಹೇಳುವ ಪ್ರಕಾರ ಕೊಲೆಯಲ್ಲಿ ಗಂಡ ಓಬಳೇಶ್ ಸೇರಿದಂತೆ ಚಿತ್ತಪ್ಪ, ಚಿನ್ನಾಪುರಪ್ಪ, ಅತ್ತೆ ಗಂಗಮ್ಮ ಭಾಗಿಯಾಗಿದ್ದಾರೆ. ಪೊಲೀಸರ ಜೊತೆ ಕಾಣದ ಕೈಗಳ ಬೆಂಬಲ ಇರೋ ಕಾರಣ ಕೇವಲ ಗಂಡನನ್ನು ಮಾತ್ರ ಪೊಲೀಸರು ಬಂಧಿಸಿದ್ದು, ಉಳಿದವರಿಗೆ ಶಿಕ್ಷೆಯಾಗಬೇಕು ಎಂದು ಸಂತ್ರಸ್ತೆಯ ಪೋಷಕರು ಆಗ್ರಹಿಸಿದ್ದಾರೆ.
ವಿಶೇಷವೆಂದ್ರೇ ಈ ಕೊಲೆ ಮಾಡಿದ್ದು ಮತ್ತು ಕೊಲೆ ಮಾಡುವ ಬಗ್ಗೆ ಮನೆಯಲ್ಲಿ ಮಾತನಾಡಿರೋದು ಕುರಿತು ನಾಲ್ಕು ವರ್ಷ ಮಗು ಸಾಕ್ಷಿ ಹೇಳ್ತಿದೆ. ಈ ಸಂಬಂಧ, ಹಲವು ಬಾರಿ ಸಾವಿತ್ರಮ್ಮನ ಪೋಷಕರು ಕೂಡ್ಲಿಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
16 ರಿಂದ 20 ಬಾರಿ ನಾನು ಪೊಲೀಸ್ ಠಾಣೆಗೆ ಹೋದ್ರೂ ಕೂಡ ಪ್ರಯೋಜನವಾಗಿಲ್ಲ. ದಯಮಾಡಿ ನಮಗೆ ನ್ಯಾಯ ಕೊಡಿಸಿ ಎಂದು ಮೃತಳ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಇತ್ತ ತಾಯಿ ಕೊಲೆಯಾಗಿದ್ದು, ತಂದೆ ಜೈಲು ಪಾಲಾಗಿದ್ದಾನೆ. ಇದರಿಂದಾಗಿ ಮಕ್ಕಳು ಅನಾಥವಾಗಿದ್ದು, ಸದ್ಯ ಮಕ್ಕಳು ಅಜ್ಜ-ಅಜ್ಜಿ ಆಶ್ರಯದಲ್ಲಿ ಬೆಳೆಯುತ್ತಿದ್ದಾರೆ.