ಬಳ್ಳಾರಿ: ಕಿಡ್ನ್ಯಾಪ್ ಆಗಿದ್ದ ಬಾಲಕಿಯನ್ನು ಬಿಡಿಸಿಕೊಳ್ಳಲು ಯಾರೂ ಬರದ ಹಿನ್ನೆಲೆಯಲ್ಲಿ ಅಪಹರಣಕಾರನೇ ಬಾಲಕಿಯನ್ನು ವಾಪಾಸ್ ಬಿಟ್ಟುಹೋದ ಅಪರೂಪದ ಘಟನೆ ಬಳ್ಳಾರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬಾಲಕಿ ನಾಪತ್ತೆ ಪ್ರಕರಣ ದಾಖಲಾಗಿ 36 ತಿಂಗಳಾದ್ರೂ ಕಂಪ್ಲಿ ಠಾಣೆಯ ಪೊಲೀಸರು ಪತ್ತೆ ಕಾರ್ಯದಲಿ ತೊಡಗದೇ ಇರೋದರಿಂದ ಅಪಹರಣಕಾರನೇ ಬಾಲಕಿಯನ್ನು 3 ವರ್ಷಗಳ ನಂತರ ಅಪಹರಿಸಿದ ಜಾಗದಲ್ಲೇ ಬಿಟ್ಟು ಹೋಗಿದ್ದಾನೆ. ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದಲ್ಲಿರೊ ದೇಗುಲದ ಬಳಿ ಬಾಲಕಿ ಬಿಟ್ಟಿದ್ದಲ್ಲದೇ, ಚೀಟಿಯೊಂದನ್ನು ಆ ಬಾಲಕಿ ಬಟ್ಟೆಗೆ ಅಂಟಿಸಿ ಹೋಗಿದ್ದಾನೆ.
ಇನ್ನು ಬಾಲಕಿ ದೊರೆತ ಮಾಹಿತಿಯನ್ನು ನೀಡಲು ಕಂಪ್ಲಿ ಪೊಲೀಸ್ ಠಾಣೆಗೆ ಕುಟುಂಬ ಸದಸ್ಯರು ಹೋದಾಗ, ಪೊಲೀಸರು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.ನಿಮ್ಮ ಮಗುವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಿಮಗಿಲ್ವಾ? ಅಂತಲೇ ಅವಾಚ್ಯ ಶಬ್ದಗಳಿಂದಲೇ ಪೊಲೀಸ್ ಸಿಬ್ಬಂದಿ ನಿಂದಿಸಿದ್ದಾರೆ. ಪತ್ರಿಕೆ ಅಥವಾ ಮಾಧ್ಯಮಕ್ಕೆ ಮಾಹಿತಿ ನೀಡದಂತೆ ತಾಕೀತು ಮಾಡಿದ್ದಾರೆ. ಬಾಲಕಿ ದೊರೆತಿರೊ ಮಾಹಿತಿ ನೀಡುವ ಜವಾಬ್ದಾರಿ ನಮ್ಮದು. ಅದು ನಿಮ್ಮದ್ದಲ್ಲ ಎಂಬ ಉದ್ಘಾರದ ಮಾತುಗಳನ್ನಾಡಿದ್ದಾರೆ ಎಂದು ಕುಟುಂಬದ ಮೂಲಗಳು ದೂರಿವೆ.
ಪ್ರಕರಣದ ಹಿನ್ನೆಲೆ :
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ಕೃಷಿಕ ಗುಬಾಜಿ ಯಲ್ಲಪ್ಪನ ಪತ್ನಿ ಮಲ್ಲಮ್ಮ ಮೂರು ವರ್ಷಗಳ ಹಿಂದೆ ಎರಡನೇ ಮಗುವಿನ ಹೆರಿಗೆಗೆ ದೇವಸಮುದ್ರ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಅವರ ಎರಡುವರ್ಷ ಎರಡು ತಿಂಗಳ ಚೊಚ್ಚಲ ಹೆಣ್ಣು ಮಗು ಉಮಾದೇವಿ ಆಕಸ್ಮಿಕವಾಗಿ ನಾಪತ್ತೆಯಾಗಿದ್ದಳು. ಇದಾದ 36 ತಿಂಗಳ ನಂತರ ದೇವಸಮುದ್ರ ಗ್ರಾಮದ ಬಲ ಕುಂದೆಪ್ಪತಾತ ದೇಗುಲದ ಬಳಿ ನ.20ರ ರಾತ್ರಿ 9ರ ಸುಮಾರಿಗೆ ಈ ಬಾಲಕಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾಳೆ. ಬಾಲಕಿ ಧರಿಸಿದ್ದ ಬಟ್ಟೆ ಮೇಲೆ ಒಂದು ಚೀಟಿ, ನೂರು ರೂಪಾಯಿ ನೋಟು ಲಗತ್ತಿಸಿದ್ದು, ಜೊತೆಗೆ ತಿಂಡಿ ತಿನಿಸು ಕಂಡು ಬಂದಿವೆ. ಈ ವೇಳೆ ಗ್ರಾಮಸ್ಥರು ಹೆಸರು ಕೇಳಿದಾಗ ದೀಪಿಕಾ ಹಿರೇಮಠ ಎಂದು, ತಾಯಿ ವೀಣಾ, ಊರು ಗಂಗಾವತಿ ಎಂದು ಉತ್ತರಿಸಿದ್ದಾಳೆ.ಪತ್ತೆಯಾದ ಬಾಲಕಿ ತಂದೆ ಗುಬಾಜಿ ಯಲ್ಲಪ್ಪ ಅವರು ಮಾತನಾಡಿ, 2016ರಲ್ಲಿ ನನ್ನ ಪತ್ನಿ ಮಲ್ಲಮ್ಮ ದೇವಸಮುದ್ರ ಗ್ರಾಮಕ್ಕೆ ಹೆರಿಗೆಗೆ ಹೋಗಿದ್ದರು. ಈ ವೇಳೆ ಮಗಳು ಉಮಾದೇವಿ ಕಾಣೆಯಾಗಿದ್ದಳು.ಈ ಕುರಿತು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಬಳಿಕ ಬಾಲಕಿಯ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಆದರೆ, ಆ ಗ್ರಾಮದ ದೇಗುಲದ ಬಳಿ ಬಾಲಕಿ ಕಂಡುಬರುತ್ತಿದ್ದಂತೆ ಜನರು ನನಗೆ ಮಾಹಿತಿ ನೀಡಿದ್ರು ಎಂದು ತಿಳಿಸಿದ್ದಾರೆ. ಒಟ್ನಲ್ಲಿ ಕಳೆದುಹೋಗಿದ್ದ ಮಗಳು ಮತ್ತೆ ಸಿಕ್ಕ ಖುಷಿಯಲ್ಲಿ ಕುಟುಂಬವರ್ಗ ಸಂಭ್ರಮಿಸುತ್ತಿದೆ.