ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಬಸವೇಶ್ವರ ಜಾತ್ರೆಗೆಂದು ಬಂದಿದ್ದ 11 ವರ್ಷದ ಬಾಲಕನೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಮೈಲಾರ ತುಂಗಭದ್ರ ನದಿ ಸೇತುವೆ ಬಳಿ ಸಂಭವಿಸಿದೆ.
ಮೃತ ಬಾಲಕ ಶಿಕಾರಿಪುರ ತಾಲೂಕು ಚಿಕ್ಕಮಾಗಡಿ ಗ್ರಾಮದ ವೀರೇಶ ಕೆರೂಡಿ ಎಂಬುವವರ ಮಗ ಪ್ರಸನ್ನ ಎಂದು ಗುರುತಿಸಲಾಗಿದೆ.
ಕುಟುಂಬಸ್ಥರೊಂದಿಗೆ ಕುರುವತ್ತಿ ಜಾತ್ರೆಗೆ ತೆರಳಿದ್ದ ಬಾಲಕ ತುಂಗಭದ್ರಾ ನದಿ ಸೇತುವೆ ಬಳಿ ಸ್ನಾನ ಮಾಡಲು ಇಳಿದಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಪರಿಣಾಮ ಬಾಲಕ ಸಾವನ್ನನಪ್ಪಿದ್ದಾನೆ. ಸ್ಥಳೀಯರ ನೆರವಿನಿಂದ ಬಾಲಕನನ್ನು ನೀರಿನಿಂದ ಹೊರ ತೆಗೆಯಲಾಗಿದ್ದು, ಮೃತ ಮಗನನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.