ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶನಿವಾರ 355 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 41,853ಕ್ಕೆ ಏರಿಕೆಯಾಗಿದ್ದರೆ, ಮೃತರ ಸಂಖ್ಯೆ 614ಕ್ಕೆ ಏರಿಕೆಯಾಗಿದೆ.
ಈವರೆಗೆ 39,567 ಜನರು ಡಿಸ್ಚಾರ್ಜ್ ಆಗಿದ್ದು, 1672 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಬಳ್ಳಾರಿ- 117, ಸಂಡೂರು-80, ಸಿರುಗುಪ್ಪ-22, ಹೊಸಪೇಟೆ-84, ಹೆಚ್.ಬಿ.ಹಳ್ಳಿ-06, ಹರಪನಹಳ್ಳಿ-07, ಹಡಗಲಿ-06 ಮತ್ತು ಹೊರ ರಾಜ್ಯದಿಂದ ಬಂದ ಐವರಲ್ಲಿ ಮೂವರಿಗೆ ಸೋಂಕು ಕಾಣಿಸಿಕೊಂಡಿದೆ.
ಸಿರುಗುಪ್ಪದ ವಿಶ್ವಜ್ಯೋತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಐವರು ಮಕ್ಕಳಿಗೆ ಸೋಂಕು:
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರ ಮತ್ತು ತಾಲೂಕಿನ ಗ್ರಾಮೀಣ ಭಾಗಗಳು ಸೇರಿ ಒಂದೇ ದಿನ 15 ಪ್ರಕರಣಗಳು ದಾಖಲಾಗಿವೆ. ನಗರದ ಹೊರ ವಲಯದಲ್ಲಿರುವ ಪ್ರತಿಷ್ಠಿತ ವಿಶ್ವಜ್ಯೋತಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಐವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಓರ್ವ ವಿದ್ಯಾರ್ಥಿಗೆ ಸೋಂಕು ಧೃಡಪಟ್ಟ ಕಾರಣ ಶಾಲೆಯ ಎಲ್ಲಾ ಮಕ್ಕಳನ್ನು ಪರೀಕ್ಷೆಗೊಳಪಡಿಸಿದಾಗ ಓರ್ವ ವಿದ್ಯಾರ್ಥಿನಿ ಮತ್ತು ನಾಲ್ವರು ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿದೆ.
ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿರುವ ವಿಷಯ ತಿಳಿಯುತ್ತಲೇ ತಹಶೀಲ್ದಾರ್ ಸತೀಶ್.ಬಿ. ಕೂಡಲಿಗಿ, ತಾಲೂಕು ವೈದ್ಯಾಧಿಕಾರಿ ಡಾ. ಈರಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ.ಭಜಂತ್ರಿ, ನಗರಸಭೆ ಪೌರಾಯುಕ್ತ ಪ್ರೇಮ್ ಚಾರ್ಲ್ಸ್, ಹಿರಿಯ ಆರೋಗ್ಯ ಸಹಾಯಕ ಗಿರೀಶ್, ಕಂದಾಯ ಅಧಿಕಾರಿ ಮಂಜುನಾಥ್, ಆರೋಗ್ಯ ಇಲಾಖೆಯ ಪ್ರಹ್ಲಾದ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಶಾಲೆಯ ಎಲ್ಲಾ ಮಕ್ಕಳ ರಕ್ತದ ಸ್ಯಾಂಪಲ್ ಸಂಗ್ರಹಿಸಿದ್ದು, ವರದಿಗಾಗಿ ಕಳಿಸಲಾಗಿದೆ. ಸದ್ಯ ಶಾಲೆಯನ್ನ 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.