ಹೊಸಪೇಟೆ: ರಾಜ್ಯದಲ್ಲಿ ರಣಹದ್ದುಗಳ ಸಂತತಿ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಮನಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ರಣಹದ್ದು ಫೀಡಿಂಗ್ ಕ್ಯಾಂಪ್ ನಿರ್ಮಿಸಲಾಗುತ್ತಿದೆ ಎಂದು ಅರಣ್ಯ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ಝೂಲಾಜಿಕಲ್ ಪಾರ್ಕ್ ಆವರಣದಲ್ಲಿ ಏರ್ಪಡಿಸಿದ್ದ 66ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಹಲವು ಕಡೆ ರಣಹದ್ದುಗಳು ಕಾಣ ಸಿಗುತ್ತಿದ್ದವು. ದನ ಸತ್ತು ಬಿದ್ದರೆ ರಣಹದ್ದುಗಳು ಇರುತ್ತಿದ್ದವು. ಆದರೆ, ಈ ದೃಶ್ಯ ಪ್ರಸ್ತುತ ಕಾಣಸಿಗುವುದಿಲ್ಲ ಎಂದರು.
ಅರಣ್ಯ ರಕ್ಷಣೆ ನಮ್ಮೆಲ್ಲ ಹೊಣೆಯಾಗಿದೆ. ಪ್ರಕೃತಿಯನ್ನು ಉಳಿಸಬೇಕು. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ. ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದರು.