ಬಳ್ಳಾರಿ: ಎಸ್ಎಸ್ಎಲ್ಸಿ ಪರೀಕ್ಷೆಗೆ ಮುನ್ನಾ ದಿನ ವಿದ್ಯಾರ್ಥಿನಿಯ ಬಾಲ್ಯ ವಿವಾಹ ತಡೆದಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಶುಕ್ರವಾರ ಮತ್ತೆ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಸೇರಿ ಮೂರು ಬಾಲ್ಯ ವಿವಾಹಗಳನ್ನು ತಡೆದಿದ್ದಾರೆ. ಇದರೊಂದಿಗೆ ಎರಡು ದಿನದಲ್ಲಿ ನಾಲ್ಕು ಬಾಲ್ಯ ವಿವಾಹಗಳನ್ನು ತಡೆದಂತಾಗಿದೆ.
ನಗರದ ಹೊರವಲಯದ ಅಲ್ಲೀಪುರದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಗೆ (16 ವರ್ಷ) ಶುಕ್ರವಾರ ನಡೆಯಲಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದು ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ.
ಅಲ್ಲೀಪುರ ನಿವಾಸಿಯಾದ ವಿದ್ಯಾರ್ಥಿನಿಗೆ ಜೂನ್ 26ರಂದು ಕಂಪ್ಲಿ ಸಮೀಪದ ಮುದ್ದಾಪುರ ಗ್ರಾಮದ ಸಂಬಂಧಿಕ ಯುವಕನೊಂದಿಗೆ ಮದುವೆ ಮಾಡಲು ಪೋಷಕರು ನಿಶ್ಚಯಿಸಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿ ಬಳ್ಳಾರಿಯ ಬಾಲಕಿಯರ ಬಾಲ ಮಂದಿರದಲ್ಲಿ ಆಶ್ರಯ ಕಲ್ಪಿಸಿ, ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ಅಲ್ಲದೆ ವಿನಾಯಕ ನಗರದಲ್ಲಿ 14 ವರ್ಷದ ಮತ್ತು ಗುಗ್ಗರಹಟ್ಟಿ ಪ್ರದೇಶದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ (17 ವರ್ಷ) ಸಂಬಂಧಿಕರ ಯುವಕನೊಂದಿಗೆ ಹಾಗೂ 16 ವರ್ಷದ ಬಾಲಕಿಯರಿಗೆ ಶುಕ್ರವಾರ ನಡೆಯಲಿದ್ದ ಮೂರು ಬಾಲ್ಯ ವಿವಾಹಗಳನ್ನು ತಡೆದು, ಅವರ ಪೋಷಕರಿಂದ ಮುಚ್ಚಳಿಕೆ ಪತ್ರಗಳನ್ನು ಬರೆಸಿಕೊಳ್ಳಲಾಗಿದೆ ಎಂದು ಸಿಡಿಪಿಒ ಜಲಾಲಪ್ಪ ತಿಳಿಸಿದರು.