ಬಳ್ಳಾರಿ: ರಾಜ್ಯವ್ಯಾಪಿ ಕರೆ ನೀಡಿರುವ ಸಾರಿಗೆ ನೌಕರರ ಮುಷ್ಕರದ ಭಾಗವಾಗಿ ಜಿಲ್ಲೆಯ ಸಾರಿಗೆ ನೌಕರರು ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿರುವ ಬೆನ್ನಲ್ಲೇ ಜಿಲ್ಲಾಡಳಿತ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯದ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲವಾಗಿ ಕರ್ನಾಟಕ ರಸ್ತೆ ಸಾರಿಗೆ ನೌಕರರ ಕೂಟ(ರಿ)ರವರು ಪ್ರತಿನಿಧಿಸಲ್ಪಟ್ಟ ಬಳ್ಳಾರಿ ವಿಭಾಗದ ನೌಕರರ ಹಾಗೂ ಅವರ ಕುಟುಂಬದವರು ಈ ದಿನ ತಟ್ಟೆ, ಲೋಟ ಬಡಿದು ಪ್ರತಿಭಟನೆ ಮಾಡುವ ಮುಖೇನ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲೆಯ ಎಲ್ಲ ತಹಶೀಲ್ದಾರರ ಕಚೇರಿಗಳಿಗೆ ಮನವಿ ಸಲ್ಲಿಸುವಂತೆ ಕರೆ ನೀಡಿದ್ದರು.
ಇದನ್ನೂ ಓದಿ: ಎರಡನೇ ದಿನದ ನೈಟ್ ಕರ್ಫ್ಯೂ: ರಾಜಧಾನಿಯಲ್ಲಿ ಪೊಲೀಸ್ ಹೈ ಅಲರ್ಟ್
ಈ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಿಆರ್ಪಿಸಿ 144 ಸೆಕ್ಷನ್ ಅನ್ವಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಏ. 11 ರ ಮಧ್ಯರಾತ್ರಿಯಿಂದ ಏ.12ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಆದೇಶಿಸಿದ್ದಾರೆ.