ಬಳ್ಳಾರಿ: ಕೋವಿಡ್ ಎರಡನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಸಕಲ ತಯಾರಿ ಮಾಡಿಕೊಂಡಿದೆ. ಉಭಯ ಜಿಲ್ಲೆಗಳಲ್ಲಿ ಆ್ಯಂಬುಲೆನ್ಸ್ ಕೊರತೆ ಆಗದಂತೆ ನೋಡಿಕೊಂಡಿರುವುದು ಇಲ್ಲಿನ ಗಮನಾರ್ಹ ಸಂಗತಿ.
ಕೋವಿಡ್ ಮೊದಲ ಅಲೆಯಲ್ಲಿ ಡಿಎಂಎಫ್ನಿಂದ ಅಗತ್ಯಕ್ಕನುಗುಣವಾಗಿ ಆ್ಯಂಬುಲೆನ್ಸ್ಗಳನ್ನು ಖರೀದಿಸಲಾಗಿದೆ. ಆ ಪೈಕಿ ಅಂದಾಜು 13 ಆ್ಯಂಬುಲೆನ್ಸ್ಗಳಲ್ಲಿ ಅಡ್ವಾನ್ಸ್ ಲೇಯರ್ ಸಪೋರ್ಟ್ ಸಿಸ್ಟಮ್ ಇದೆ. ಉಳಿದ 96 ಆ್ಯಂಬುಲೆನ್ಸ್ಗಳು ಜನರಲ್ ಲೇಯರ್ ಸಿಸ್ಟಮ್ ಹೊಂದಿವೆ. ಹೀಗಾಗಿ, ಆ್ಯಂಬುಲೆನ್ಸ್ ಕೊರತೆ ಎದುರಾಗಿಲ್ಲ.
ಸಕಾಲದಲ್ಲಿ ಕೋವಿಡ್ ಸೋಂಕಿತರನ್ನು ಶಿಫ್ಟ್ ಮಾಡೋ ಕಾರ್ಯದಲ್ಲಿ ಈ ಸರ್ಕಾರಿ ಆ್ಯಂಬುಲೆನ್ಸ್ಗಳು ತೊಡಗಿಕೊಂಡಿವೆ. ಹೋಮ್ ಐಸೋಲೇಷನ್ನಲ್ಲಿರುವ ಕೋವಿಡ್ ಸೋಂಕಿತರಲ್ಲಿ ಆಕ್ಸಿಜನ್ ಲೆವೆಲ್ ಕಮ್ಮಿಯಾಗೋದು ಸೇರಿದಂತೆ ಆರೋಗ್ಯದಲ್ಲಿ ಏರುಪೇರಾದ್ರೆ ಕೂಡಲೇ ಆ ಸೋಂಕಿತರ ಮನೆ ಬಳಿ ಆ್ಯಂಬುಲೆನ್ಸ್ ವಾಹನ ತೆರಳಿ, ಅವರನ್ನು ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಗುತ್ತದೆ. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವುದು ವಿಪರ್ಯಾಸ.
ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಡಿಹೆಚ್ಒ ಡಾ. ಹೆಚ್.ಎಲ್.ಜನಾರ್ಧನ್, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಆ್ಯಂಬುಲೆನ್ಸ್ ಕೊರತೆ ಇಲ್ಲ. ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸೇರಿದಂತೆ ಉಭಯ ಜಿಲ್ಲೆಗಳ ಆಯಾ ತಾಲೂಕಿನಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಆ್ಯಂಬುಲೆನ್ಸ್ ವಾಹನಗಳು ಸಮರ್ಪಕವಾಗಿ ಲಭ್ಯವಾಗಿವೆ.
ಇದನ್ನೂ ಓದಿ: ಔಷಧಿಗಳನ್ನು ಕದ್ದೊಯ್ಯುತ್ತಿದ್ದ ಆಸ್ಪತ್ರೆ ಸಿಬ್ಬಂದಿ... ಗ್ರಾಮಸ್ಥರ ಕೈಗೆ ಸಿಕ್ಕಿ ತಪ್ಪಿಸಿಕೊಂಡು ಪರಾರಿ!
ವಾಹನಗಳ ಚಾಲಕರೂ ಕೂಡ ಸಮರ್ಪಕವಾಗಿ ಇದ್ದಾರೆ. ಮೂರ್ನಾಲ್ಕು ವಾಹನಗಳಿಗೆ ಮಾತ್ರ ಚಾಲಕರ ಕೊರತೆಯಿದೆ. ಶೀಘ್ರವೇ ಹೊರ ಗುತ್ತಿಗೆ ಆಧಾರದ ಅಡಿಯಲ್ಲಿ ಭರ್ತಿಗೆ ಕ್ರಮ ವಹಿಸಲಾಗುವುದು ಎಂದರು. ಇನ್ನು ಟ್ರಾಫಿಕ್ನಲ್ಲಿ ಸಿಲುಕಿ ಅನಗತ್ಯವಾಗಿ ತೊಂದರೆ ಅನುಭವಿಸಿರುವ ಉದಾಹರಣೆಗಳು ಕೂಡ ಉಭಯ ಜಿಲ್ಲೆಗಳಲ್ಲಿ ಇಲ್ಲ ಎಂದು ಮಾಹಿತಿ ನೀಡಿದ್ರು.