ಬೆಳಗಾವಿ: ಘಟಪ್ರಭಾ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕನೋರ್ವ ಕಾಲು ಜಾರಿ ಬಿದ್ದು ನೀರುಪಾಲಾಗಿರುವ ಘಟನೆ ಮೆಳವಂಕಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಗೋಕಾಕ್ ತಾಲೂಕಿನ ರುದ್ರಪ್ಪ ವಕ್ಕುಂದ (18) ಘಟಪ್ರಬಾ ನದಿಯಲ್ಲಿ ನೀರುಪಾಲಾಗಿರುವ ಯುವಕ. ಈತ ಗೋಕಾಕ್ನ ಜೆಎಸ್‌ಎಸ್ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಓದುತ್ತಿದ್ದ.
ನಿನ್ನೆ ತನ್ನ ಗೆಳೆಯರ ಜೊತೆಗೂಡಿ ನದಿಯಲ್ಲಿ ಈಜಲು ಹೋದ ಸಮಯದಲ್ಲಿ ಕಟ್ಟೆಯ ಮೇಲೆ ನಿಂತಿದ್ದ ವೇಳೆ ಕಾಲು ಜಾರಿ ಆಳದ ನೀರಿನಲ್ಲಿ ಬಿದ್ದ ಪರಿಣಾಮ ಮೇಲೆ ಬರಲಾಗದೆ ನೀರುಪಾಲಾಗಿದ್ದಾನೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಘಟನೆ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.