ಬೆಳಗಾವಿ: ರಕ್ತದ ಮಡುವಿನಲ್ಲಿ ಬಿದ್ದಿರುವ ವ್ಯಕ್ತಿ. ಮಕ್ಕಳನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಕುಟುಂಬಸ್ಥರು. ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು. ಇವೆಲ್ಲಾ ಬೆಳಗಾವಿ ತಾಲೂಕಿನ ಚಂದಗಡ ಗ್ರಾಮದಲ್ಲಿ ಕಂಡು ಬಂದ ದೃಶ್ಯಗಳು.
ಇಲ್ಲಿ ಕೊಲೆಯಾದವ ಕೃಷ್ಣಾ ಕಾಲಕುಂದ್ರಿ (30). ಈತ ಪ್ರತಿದಿನ ಕುಡಿದು ಬಂದು ತಾಯಿಯ ಜತೆಗೆ ಗಲಾಟೆ ಮಾಡುತ್ತಿದ್ದನಂತೆ. ಇದರಿಂದ ಸಿಟ್ಟಿಗೆದ್ದ ತಮ್ಮ ಮಿಥುನ್ (27) ಅಣ್ಣನನ್ನೇ ಕೊಲೆ ಮಾಡಿದ್ದಾನೆ.
ಪ್ರಕರಣದ ವಿವರ:
ಕೊಲೆಯಾದ ಕೃಷ್ಣ ಕುಡಿದು ಹಣಕ್ಕಾಗಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದನಂತೆ. ಈತ ಹಠ ಮಾಡಿದ್ದಕ್ಕೆ ಸಾಲ ಮಾಡಿ ಟ್ರ್ಯಾಕ್ಟರ್ ಖರೀದಿ ಮಾಡಿ ಕೊಡಿಸಲಾಗಿತ್ತು. ನಿನ್ನೆ ಕೂಡ ಇದೇ ವಿಚಾರವಾಗಿ ಅಣ್ಣ- ತಮ್ಮನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಅಣ್ಣನಿಗೆ ತಮ್ಮ ಒಂದೇಟು ಹೊಡೆದಿದ್ದು, ಇದರಿಂದ ಕೋಪಗೊಂಡ ಕೃಷ್ಣ ಪಕ್ಕದಲ್ಲೇ ಇದ್ದ ರಾಡ್ ತಂದು ಇದರಿಂದ ಹೊಡಿ ಎಂದು ಮತ್ತೆ ಜಗಳಕ್ಕೆ ಮುಂದಾಗಿದ್ದಾನೆ. ಆದರೂ ತಮ್ಮ ಮಿಥುನ್ ತಾಳ್ಮೆಯಿಂದ ಹೋಗಿ ಮಲಗು ಎಂದು ಅಣ್ಣನಿಗೆ ಹೇಳಿದ್ದಾನೆ. ಇಷ್ಟಕ್ಕೆ ಸುಮ್ಮನಿರದ ಕೃಷ್ಣ ಮತ್ತೆ ಮತ್ತೆ ಜಗಳಕ್ಕೆ ಮುಂದಾಗಿದ್ದಾನೆ. ಈ ವೇಳೆ ಕೋಪ ಅತಿರೇಕಕ್ಕೆ ತಿರುಗಿ ಪಕ್ಕದಲ್ಲೇ ಇದ್ದ ರಾಡ್ ಹಾಗೂ ಕುಡುಗೋಲುವಿನಿಂದ ಅಣ್ಣನ ಮೇಲೆ ಹಲ್ಲೆ ನಡೆಸಿದ್ದಾನೆ. ಮನೆಯ ಒಳಗಡೆ ರಕ್ತದ ಮಡುವಿನಲ್ಲಿ ಬಿದ್ದ ಕೃಷ್ಣನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದರೂ, ಮಾರ್ಗಮಧ್ಯದಲ್ಲೇ ಆತ ಮೃತಪಟ್ಟಿದ್ದಾನೆ.
ಆರೋಪಿ ಮಿಥುನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮಾರಿಹಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.