ಬೆಳಗಾವಿ: ಕನ್ನಡ ನೆಲದಲ್ಲೇ ಇದ್ದುಕೊಂಡು ಕನ್ನಡನಾಡಿನ ಅನ್ನ ತಿನ್ನುತ್ತಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕನ್ನಡ ಧ್ವಜವನ್ನೇ ತೆರವು ಸೇರಿದಂತೆ ನಾಡದ್ರೋಹಿ ಕೆಲಸ ಮಾಡುತ್ತಿದ್ದರೂ ಎಂಇಎಸ್ ಸಂಘಟನೆಯ ವಿರುದ್ಧ ಈವರೆಗಿನ ಯಾವೊಂದು ಸರ್ಕಾರಗಳು ಸೂಕ್ತಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂಬುವುದು ಕನ್ನಡಿಗರ ಪ್ರಶ್ನೆಯಾಗಿದೆ.
ನಮ್ಮ ನೆಲದಲ್ಲಿ ಜಾಂಡಾ ಹೂಡಿರುವ ನಮ್ಮ ನೆಲದ ಅನ್ನ ತಿಂದು ತೇಗುತ್ತಾ ಬದುಕು ಕಟ್ಟಿಕೊಂಡಿರುವ ಎಂಇಎಸ್‍ನ ಗೊಡ್ಡು ಬೆದರಿಕೆಗೆ ಹಾಗೂ ನಾಡದ್ರೋಹಿ ಕೆಲಸಕ್ಕೆ ಕಠಿಣಕ್ರಮ ಜರುಗಿಸಲು ಕರ್ನಾಟಕ ಸರ್ಕಾರ ಹೆದರುತ್ತಿದೆಯೇ ಎಂಬ ಪ್ರಶ್ನೆ ಕನ್ನಡಿಗರಲ್ಲಿ ಮೂಡಿದ್ದು ಸುಳ್ಳಲ್ಲ. ಕಳೆದ 50 ವರ್ಷಗಳಿಂದ ಒಂದಿಲೊಂದು ಕ್ಯಾತೆ ತೆಗೆಯುತ್ತಿರುವ ಪುಂಡ, ನಾಡದ್ರೋಹಿ ಎಂಇಎಸ್ ಕಿರಿಕ್ ಮಾತ್ರ ನಿಲ್ಲುತ್ತಿಲ್ಲ.
ನಮ್ಮ ನಾಡಿನಲ್ಲಿ ನಮ್ಮ ಕಚೇರಿ ಮುಂದೆ ಕನ್ನಡದ ಧ್ವಜ ನೆಟ್ಟಿದ್ದಕ್ಕೆ ಉರಿದುರಿದು ಬೀಳ್ತಿರುವ ನಾಡದ್ರೋಹಿಗಳು ಸಭೆಗಳ ಮೇಲೆ ಸಭೆ ಮಾಡಿ ಧ್ವಜ ತೆಗೆಸಲು ತಯಾರಿ ನಡೆಸುತ್ತಿದ್ದಾರೆ. ಮೊನ್ನೆ ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಬಂದ ಪುಂಡರು ಡಿಸಿ ಬರಲಿಲ್ಲ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿ ಪೊಲೀಸರ ಜತೆಗೂ ವಾಗ್ವಾದ ನಡೆಸಿ, ಪೊಲೀಸರನ್ನೇ ತಳ್ಳಾಟ ಮಾಡಿದ್ದರು. ಇತ್ತ ಸ್ಥಳಕ್ಕೆ ಬಂದ ಡಿಸಿಗೂ ಏರು ಧ್ವನಿಯಲ್ಲಿ ಮಾತನಾಡಿ ಎಚ್ಚರಿಕೆ ನೀಡಿ ನಾಡಧ್ವಜ ತೆರವುಗೊಳಿಸುವಂತೆ 15ದಿನಗಳ ಕಾಲ ಗಡುವು ನೀಡಿದ್ದಾರೆ.
ನಮ್ಮ ನಾಡಿನ ಕನ್ನಡ ಧ್ವಜವನ್ನೇ ತೆರವು ಮಾಡುವಂತೆ ಹೇಳಲು ಇವರ್ಯಾರು. ಇವರಿಗೇನು ಹಕ್ಕಿದೆ. ಕರ್ನಾಟಕ ಸರ್ಕಾರಕ್ಕೆ ಗಡುವು ನೀಡುವ ಇಂತಹ ಸಂಘಟನೆ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳುತ್ತಿಲ್ಲವೇಕೆ. ನಾಡಿನ ರಕ್ಷಣೆಗೋಸ್ಕರ ಎಂಇಎಸ್‍ಗೆ ಸರ್ಕಾರ ತಕ್ಕ ಪಾಠ ಕಲಿಸಬೇಕಿದೆ ಎಂದು ಕರುನಾಡ ಜನರು ಕಿಡಿಕಾರುತ್ತಿದ್ದಾರೆ.
ಅಲ್ಲದೇ ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ನಾಯಕರು ರಾಜ್ಯ ಸರ್ಕಾರ ವಿರುದ್ಧ ಕೀಡಿಕಾರಿದ್ದರು. ಮೊನ್ನೆ ಡಿಸಿಎಂ ಲಕ್ಷ್ಮಣ ಸವದಿ ಕೂಡ ಎಂಇಎಸ್‍ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಭಗವಾ ಧ್ವಜದ ಹೆಸರಲ್ಲಿ ಕನ್ನಡಿಗರ ಮೇಲೆ ಸವಾರಿ:
ಹಿಂದುತ್ವದ ಸಂಕೇತವಾಗಿರುವ ಭಗವಾ ಧ್ವಜವನ್ನು ಐದು ದಶಕಗಳ ಕಾಲ ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಮೇಲೆ ಹಾರಿಸಲಾಗಿತ್ತು. ಭಗವಾ ಧ್ವಜ ತೆರವು ಮಾಡುವಂತೆ ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿ ಕೋರ್ಟ್ ಮೊರೆ ಹೋಗಿದ್ರು. ಬಳಿಕ ಹೊಸ ಕಟ್ಟಡಕ್ಕೆ ಮಹಾನಗರ ಪಾಲಿಕೆ ಸ್ಥಳಾಂತರವಾಯಿತು. ಇದಾದನಂತರವೂ ಪಾಲಿಕೆಯ ಕಚೇರಿ ಮೇಲೆ ಭಗವಾ ಧ್ವಜ ಹಾರಿಸಲು ಆಗಿನ ಆಡಳಿತ ಪಾಲಿಕೆಯಲ್ಲಿ ಠರಾವು ಪಾಸ್ ಮಾಡಿತ್ತು. ಆದ್ರೆ, ಆಗ ಕನ್ನಡಪರ ಸಂಘಟನೆಗಳ ವಿರೋಧ ಹಿನ್ನೆಲೆ ಜಿಲ್ಲಾಡಳಿತ ಭಗವಾ ಧ್ವಜ ಹಾರಿಸಲು ಅನುಮತಿ ನೀಡಿರಲಿಲ್ಲ ಇದೀಗ ಮತ್ತೆ ಕ್ಯಾತೆ ತೆಗೆದಿರುವ ಎಂಇಎಸ್ ಪುಂಡಾಟಿಕೆ ಪ್ರದರ್ಶನ ಮಾಡುತ್ತಿದೆ.
ಇದಲ್ಲದೇ ಎಂಇಎಸ್‍ಗೆ ತನ್ನದೇ ಆದ ಧ್ವಜ ಇಲ್ಲದಿದ್ದರೂ ಒಂದು ಧರ್ಮಕ್ಕೆ ಸೀಮಿತ, ಪ್ರತೀಕವಾಗಿರುವ ಭಗವಾ ಧ್ವಜದ ಹೆಸರಿನಲ್ಲಿ ಪುಂಡರು ಕನ್ನಡಿಗರ ಮೇಲೆ ಸವಾರಿ ಮಾಡುತ್ತಿದ್ದಾರೆ. ಇದಕ್ಕೆ ಸಾಥ್ ನೀಡಿರುವ ಶಿವಸೇನೆಯ ಮುಖಂಡರೂ ಮನೆಮನೆಗೂ ಭಗವಾ ಧ್ವಜ ಹಾರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಂಗಾಲಾಗಿರುವ ಎಂಇಎಸ್:
ಮಹಾರಾಷ್ಟ್ರ ಏಕೀಕರಣ ಸಮಿತಿ ಕಳೆದ ಐದು ದಶಕಗಳಿಂದಲೂ ಕುಂದಾನಗರಿ ಬೆಳಗಾವಿಯಲ್ಲಿ ತನ್ನ ಪುಂಡಾಟಿಕೆ ಪ್ರದರ್ಶಿಸುತ್ತಿದೆ. ಇದೀಗ ರಾಜಕೀಯ ನೆಲೆ ಕಳೆದುಕೊಂಡು ಕಂಗಾಲಾಗಿರುವ ಎಂಇಎಸ್ ಮತ್ತೇ ಹೇಗಾದರೂ ಮಾಡಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕೆಂದು ಇಂತಹ ನಾಡದ್ರೋಹಿ ಕೆಲಸಕ್ಕೆ ಕೈ ಹಾಕುತ್ತಿದೆ.
ರಾಜಕೀಯ ಲಾಭಕ್ಕಾಗಿ ನಾಡಿಗೆ ದ್ರೋಹ ಬಗೆಯುತ್ತಿರುವ ಸರ್ಕಾರಗಳು:
ಕನ್ನಡ ನೆಲದಲ್ಲೇ ಇದ್ದುಕೊಂಡು ಕನ್ನಡ ಧ್ವಜಕ್ಕೆ ಭದ್ರತೆ ಕೊಡುವ ಪರಿಸ್ಥಿತಿ ಬಂದಿದೆ ಎಂಬುದು ಎಂತಹ ವಿಪರ್ಯಾಸದ ಸಂಗತಿ. ಎಂಇಎಸ್ ಗೊಡ್ಡು ಬೆದರಿಕೆಗೆ ಹೆದರದೇ ನಾಡದ್ರೋಹಿ ಘೋಷಣೆ ಕೂಗುವ, ಕನ್ನಡಿಗರಿಗೆ ಕನ್ನಡ ಧ್ವಜ ತೆರವುಗೊಳಿಸುವಂತೆ ಗಡುವು ನೀಡುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದ್ದ ಸರ್ಕಾರಗಳು ಓಟ್ಬ್ಯಾಂಕ್ ಹಿನ್ನೆಲೆ ಎಂಇಎಸ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವುದು ಕನ್ನಡಿಗರ ಅಭಿಪ್ರಾಯ.
ಬೆಳಗಾವಿ ಗಡಿ ಜಿಲ್ಲೆಯಲ್ಲಿ ಮರಾಠಿ ಭಾಷಿಗರ ಪ್ರಭಾವ ಹಿನ್ನೆಲೆ ನಾಡಿನ ಹಿತಾಶಕ್ತಿ ಮರೆಯುತ್ತಿರುವ ಜಿಲ್ಲೆಯ ಪ್ರಭಾವಿ ನಾಯಕರು ತಮ್ಮ ರಾಜಕೀಯ ಅಸ್ತಿತ್ವಕ್ಕೆ ಮಾತ್ರ ಹೋರಾಡುತ್ತಿದ್ದಾರೆ ಎಂಬ ಆರೋಪವಿದೆ. ನಾಡಿನ ಹಿತಕ್ಕಾಗಿ ಕನ್ನಡನಾಡಿನ ನೆಲಕ್ಕಾಗಿ ಇಲ್ಲಿನ ನಾಯಕರು ಧ್ವನಿ ಎತ್ತಬೇಕಿದೆ ಎನ್ನುವುದು ಪ್ರತಿಯೊಬ್ಬ ಕರುನಾಡಿನ ಮಗನ ಮಾತು.