ಬೆಳಗಾವಿ : ಜನವರಿ 26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ನೂರಕ್ಕೆ ನೂರರಷ್ಟು ಬಿಜೆಪಿಯವರು ಕುಮ್ಮಕ್ಕಿನಿಂದಲೇ ಆಗಿದೆ. ರೈತರ ಹೋರಾಟ ನಮ್ಮ ಪ್ರಾಯೋಜಿತದಲ್ಲಿ ನಡೆಯುತ್ತಿಲ್ಲ. ನಾವು ರೈತ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಕೃಷಿ ಮಸೂದೆ ವಾಪಸ್‌ಗೆ ಆಗ್ರಹಿಸಿ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ರಾಜ್ಯ, ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಬೇಕು. ದೇಶದ ರೈತರೆಲ್ಲರೂ ನೂತನ ಕೃಷಿ ಮಸೂದೆ ವಿರೋಧಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಹಠ ಹಿಡಿಯುವುದು ಸರಿಯಲ್ಲ. ಕಾಂಗ್ರೆಸ್ ಪ್ರಾಯೋಜಕತ್ವದ ಹೋರಾಟ ಎಂಬುವುದು ಬಿಜೆಪಿಗೆ ಒಂದು ನೆಪವಾಗಿದೆ.
ನಾವು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಅಷ್ಟೇ.. ರೈತ ಹೋರಾಟದ ರೂಪರೇಷೆ ಮಾಡಿದವರು ರೈತ ಸಂಘಟನೆಗಳು. ಹೀಗಾಗಿ, ನಮಗೂ ಅದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ರೈತರು ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ನಾವು ಇತ್ತೀಚೆಗೆ ಬೆಂಬಲ ನೀಡಿದ್ದೇವೆ. ಇದು ರೈತ ಸಂಘಟನೆಗಳ ಸ್ವಂತ ನಿರ್ಧಾರದಿಂದಾದ ಪ್ರತಿಭಟನೆ ಎಂದರು.
ಜ.26ರಂದು ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ಹಿಂಸಾಚಾರ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಸ್ಪಾನ್ಸರ್‌ನಿಂದಲೇ ದೆಹಲಿಯಲ್ಲಿ ಹಿಂಸಾಚಾರ ಆಗಿದೆ. ಬಿಜೆಪಿ ಬೆಂಬಲಿತ ನಟನೋರ್ವ ಬಾವುಟ ಹಚ್ಚಿ ಇಷ್ಟೆಲ್ಲಾ ಸಮಸ್ಯೆಗೆ ಕಾರಣನಾಗಿದ್ದು, ಉದ್ದೇಶ ಪೂರ್ವಕವಾಗಿ ರೈತರ ಹೋರಾಟ ದಿಕ್ಕು ತಪ್ಪಿಸಲು ಬಿಜೆಪಿಯವರು ಪ್ರಯತ್ನಿಸಿದ್ದಾರೆ. ಆದರೂ ಯಶಸ್ವಿಯಾಗಿಲ್ಲ. ಜನ ಅದಕ್ಕೆ ಸ್ಪಂದನೆ ಮಾಡಿಲ್ಲ.
100 ಪರ್ಸೆಂಟ್ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದಲೇ ಹಿಂಸಾಚಾರ ಆಗಿದೆ. ಪ್ರಧಾನಿ ಜೊತೆ ಆರೋಪಿತ ನಟನ ಫೋಟೋ ವಾಟ್ಸ್ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಆ ನಟ ಬಿಜೆಪಿ ಕಟ್ಟಾ ಕಾರ್ಯಕರ್ತ. ಆತನೇ ಜನರನ್ನ ಕರೆದುಕೊಂಡು ಹೋಗಿ ಇದೆಲ್ಲಾ ಮಾಡಿದ್ದಾನೆ. ರೈತರ ಹೋರಾಟದ ದಿಕ್ಕು ತಪ್ಪಿಸಲು, ರೈತರ ಅಪಪ್ರಚಾರಕ್ಕೆ ಮಾಡಿದ ಕೃತ್ಯವಾಗಿದೆ ಎಂದು ಆರೋಪಿಸಿದರು.
ರೈತರ ಪ್ರತಿಭಟನೆ ಕುರಿತು ವಿದೇಶಿ ಸೆಲೆಬ್ರಿಟಿಗಳು ಟ್ವೀಟ್‌ಗೆ ವಿರೋಧದ ವಿಚಾರಕ್ಕೆ, ಬೇರೆ ದೇಶದಲ್ಲಿ ಅನ್ಯಾಯವಾದಾಗ ನಾವು ಧ್ವನಿ ಎತ್ತಿಲ್ವಾ?. ಶ್ರೀಲಂಕಾದಲ್ಲಿ ಅನ್ಯಾಯವಾದಾಗ ನಮ್ಮ ದೇಶದ ಸೈನಿಕರು ಹೋಗಿದ್ರು. ಬಾಂಗ್ಲಾ ದೇಶದಲ್ಲಿ ಅನ್ಯಾಯ ಆದಾಗ ಇಂದಿರಾ ಗಾಂಧಿ ಬೆಂಬಲಿಸಿ ದೇಶ ಸೆಪರೇಟ್ ಮಾಡಿದರು ಎಂದರು.
ಬೇರೆ ದೇಶಗಳಲ್ಲಿ ಅನ್ಯಾಯವಾದಾಗ ನಮ್ಮ ದೇಶದವರು ಸಪೋರ್ಟ್ ಮಾಡಿದ್ದಾರೆ. ನಮ್ಮ ಪ್ರಧಾನಿ ಟ್ರಂಪ್ ಪರವಾಗಿ ಕ್ಯಾನ್ವಾಸ್ ಮಾಡಿಲ್ವಾ?. ಬೇರೆ ದೇಶಕ್ಕೆ ಪ್ರಧಾನಿ ಮೋದಿ ಏಕೆ ಹೋಗಬೇಕು. ನಮ್ಮ ದೇಶದ ಕೆಲವರು ಒತ್ತಡದ ಮೇಲೆ ಟ್ವೀಟ್ ಮಾಡ್ತಿದಾರೆ. ನೀವು ಟ್ವೀಟ್ ಮಾಡಿ ಎಂದು ಕೇಂದ್ರ ಸರ್ಕಾರ ಒತ್ತಡ ಮಾಡುತ್ತಿದೆ ಎಂದರು.
ಸಚಿನ್ ತೆಂಡೂಲ್ಕರ್ ಕಟೌಟ್‌ಗೆ ಮಸಿ ಬಳಿದು ಪ್ರತಿಭಟನೆ ವಿಚಾರಕ್ಕೆ, ಸಚಿನ್ ತೆಂಡೂಲ್ಕರ್ ಭಾವಚಿತ್ರಕ್ಕೆ ಮಸಿ ಬಳೆದು ಪ್ರತಿಭಟಿಸಿರೋದು ಪರಿಹಾರವಲ್ಲ. ಏನಾದರೂ ಒತ್ತಡ ಬಂದ್ರೆ ಸ್ವಯಂಪ್ರೇರಿತವಾಗಿ ತಮ್ಮ ಪ್ರಶಸ್ತಿಗಳನ್ನು ವಾಪಸ್ ಕೊಡಬೇಕು. ರೈತರು, ದೇಶಕ್ಕಿಂತ ಯಾವುದೇ ಪ್ರಶಸ್ತಿ ದೊಡ್ಡದಲ್ಲ ಎಂದರು.
ಬೆಳಗಾವಿ ಬೈ ಎಲೆಕ್ಷನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ. ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ವಿಧಾನಸಭಾ ಕ್ಷೇತ್ರವಾರು ಭೇಟಿ ನೀಡುತ್ತಿದ್ದೇವೆ.
ನಮ್ಮ ಪಾಡಿಗೆ ನಾವು ನಿರಂತರವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ನಮ್ಮ ಸೈನ್ಯ ಮೊದಲಿನಿಂದ ಗಟ್ಟಿಯಾಗಿದೆ. ನಾವು ಬಿಜೆಪಿಯವರ ಹಾಗೆ ವಾಟ್ಸ್ಆ್ಯಪ್‍ನಲ್ಲಿ ಮಾಡೋದಿಲ್ಲ. ಇನ್ನು, ಮೂರ್ನಾಲ್ಕು ವರ್ಷದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ ಎಂದರು.
ಓದಿ: ವಿಧಾನಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದೇ ಅಂತಿಮ ನಿರ್ಧಾರ: ಸತೀಶ್ ಜಾರಕಿಹೊಳಿ
ಕುರುಬ ಸಮುದಾಯದ ಮೀಸಲಾತಿ ಹೋರಾಟವನ್ನು ಸಚಿವ ಈಶ್ವರಪ್ಪನವರೇ ನೇತೃತ್ವ ವಹಿಸಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಈ ಸಂಬಂಧ ಅವರೇ ಉತ್ತರ ಕೊಡಬೇಕು. ಪೆನ್ನು, ಹಾಳೆ ಅವರ ಕೈಯಲ್ಲಿಯೇ ಇದೆ. ಹೀಗಾಗಿ, ನಾವೇನು ಉತ್ತರ ಕೊಡಬೇಕು.
ಯಾರ್ಯಾರಿಗೆ ನ್ಯಾಯ ಸಮ್ಮತವಾಗಿ ಮೀಸಲಾತಿ ಸಿಗಬೇಕೋ ಅವರೆಲ್ಲರಿಗೂ ಮೀಸಲಾತಿ ಸಿಗಲೇಬೇಕು ಎಂದು ಪಂಚಮಸಾಲಿ, ಕುರುಬ ಸಮುದಾಯದ ಮೀಸಲಾತಿ ಹೋರಾಟದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು.