ಬೆಳಗಾವಿ: ಇಲ್ಲಿನ ಅಜಮ್ ನಗರದ ಕಿಲ್ಲಾ ರಸ್ತೆ ಬದಿಯಲ್ಲಿ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿರುವ ಅಲೆಮಾರಿಗಳು ತಿನ್ನಲು ಊಟ ಸಹ ಇಲ್ಲದೇ ಪರದಾಡುವಂತಾಗಿದೆ.
ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಿಸುವುದರಿಂದ ನಗರದಲ್ಲಿನ ಎಲ್ಲ ಹೋಟೆಲ್ಗಳು ಬಂದ್ ಆಗಿರುವ ಪರಿಣಾಮ ಬಿಹಾರ್, ರಾಜಾಸ್ಥಾನದ 75ಕ್ಕೂ ಹೆಚ್ಚಿನ ಕುಟುಂಬಗಳು ಸುಮಾರು 72 ಗಂಟೆಗಳಿಂದ ಊಟ ಮಾಡಿರಲಿಲ್ಲ. ಅವರ ಈ ದಯನೀಯ ಪರಿಸ್ಥಿತಿ ಬಗ್ಗೆ ತಿಳಿದ ನಗರದ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಅಲೆಮಾರಿ ಜನಾಂಗದ ಕುಟುಂಬದ ಸಹಾಯಕ್ಕೆ ಧಾವಿಸಿದ್ದಾರೆ. ತಮ್ಮ ಮನೆಗಳಲ್ಲಿಯೇ ಅಡುಗೆ ಮಾಡಿಕೊಂಡು ಎಲ್ಲ ಕುಟುಂಗಳಿಗೆ ಊಟ, ಬಿಸ್ಕತ್ತು ಸೇರಿದಂತೆ ಅಗತ್ಯ ವಸ್ತುಗಳನ್ನು ಹಂಚಿ ಮಾನವೀಯತೆ ಮೆರೆದಿದ್ದಾರೆ.
ಈ ಸಹಾಯ ಹಸಿವಿನಿಂದ ಕಂಗಾಲಾಗಿದ್ದ ಅಲೆಮಾರಿ ಜನಾಂಗದ ಮಕ್ಕಳು, ಮಹಿಳೆಯರು ಸೇರಿದಂತೆ 75 ಕುಟುಂಬಗಳಲ್ಲಿದ್ದವರಿಗೆ ಮರು ಜೀವ ಬಂದಂತಾಗಿದೆ. ತಮಗೆ ಸಹಾಯ ಮಾಡಿದವರಿಗೆ ಈ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.