ಬೆಳಗಾವಿ : ಕೊರೊನಾ ಕರ್ಫ್ಯೂ ಉಲ್ಲಂಘಿಸಿ ಮನೆ ಬಿಟ್ಟು ವಿನಾಕಾರಣ ಹೊರಗಡೆ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ವಾಹನಗಳನ್ನ ಸೀಜ್ ಮಾಡಿದ್ದಾರೆ.
ದಿನದಿಂದ ದಿನಕ್ಕೆ ಬೆಳಗಾವಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ನಡುವೆ ನಗರದ ಪ್ರಮುಖ ರಸ್ತೆಗಳಲ್ಲಿ ಜನರ ಓಡಾಟ ಹೆಚ್ಚಾಗಿದ್ದು, ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ನಿನ್ನೆ ನಗರದಲ್ಲಿ ಮೂವರು ಕೊರೊನಾಗೆ ಬಲಿಯಾಗಿದ್ದಾರೆ. ಹೀಗಾಗಿ, ಕಟ್ಟುನಿಟ್ಟಾಗಿ ನಿಯಮ ಪಾಲಿಸಲು ಪೊಲೀಸರು ಮುಂದಾಗಿದ್ದು, ರಸ್ತೆಗಿಳಿದ ವಾಹನ ಸವಾರರನ್ನ ವಾಪಸ್ ಕಳುಹಿಸುತ್ತಿದ್ದಾರೆ.
ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಡಾ. ಕೆ. ಹರೀಶ್ಕುಮಾರ್, ಪಾಲಿಕೆ ಆಯುಕ್ತ ಜಗದೀಶ್ ಕೆ.ಹೆಚ್, ಮಾರ್ಕೇಟ್ ಎಸಿಪಿ ಸದಾಶಿವ ಕಟ್ಟಿಮನಿ ಹಾಗೂ ಎಸಿ ಅಶೋಕ ತೇಲಿ ಅವರಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಅಲ್ಲದೆ ಎಂದಿನಂತೆ ವ್ಯಾಪಾರ, ವಹಿವಾಟು ನಡೆಯುತ್ತಿದೆ ಎಂದು ತರಾಟೆಗೆ ತೆಗೆದುಕೊಂಡು, ಎಲ್ಲರನ್ನು ತೆರವುಗೊಳಿಸಲು ಸೂಚನೆ ನೀಡಿದರು.