ಬೆಳಗಾವಿ: ಜಿಲ್ಲೆಯ ರಾಜಕಾರಣಿಗಳು ಗಂಡಸರು ಅಲ್ಲ, ಹೆಂಗಸರೂ ಅಲ್ಲ, ವಿಚಿತ್ರ ರಾಜಕಾರಣಿಗಳು. ಎಲ್ಲರೂ ಮರಾಠರ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪಿಸಿದರು.
ಪೀರನವಾಡಿ ವಿವಾದ ಸಂಬಂಧ ನಡೆದ ಸಂಧಾನ ಸಭೆಯಲ್ಲಿ ನಿರ್ಣಯದ ವಿರುದ್ಧ ಪ್ರತಿಭಟನೆ ನಡೆಸಲು ಬೆಳಗಾವಿಗೆ ಬರುತ್ತಿದ್ದ ವಾಟಾಳ್ ಅವರನ್ನು ಪೊಲೀಸರು ಹಿರೇಬಾಗೇವಾಡಿ ಬಳಿ ತಡೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಶಾಸಕರು ಮರಾಠಾ ಏಜೆಂಟರುಗಳು. ಅಂಗಡಿಯಿಂದ ಹಿಡಿದು ಮುಂಗಟ್ಟುವರೆಗೂ ಎಲ್ಲರದ್ದೂ ಇದೇ ಪರಿಸ್ಥಿತಿ ಎಂದು ಕೂಗಾಡಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಬೇಕು. ಎರಡು ವರ್ಷಗಳಿಂದ ಸುವರ್ಣಸೌಧದಲ್ಲಿ ಅಧಿವೇಶನ ನಡೆದಿಲ್ಲ. ಸರ್ಕಾರಕ್ಕೆ ಉತ್ತರ ಕರ್ನಾಟಕದ ಬಗ್ಗೆ ಪ್ರಾಮಾಣಿಕ ಚಿಂತನೆ ಇದ್ರೆ ಸೌಧದಲ್ಲಿ ಅಧಿವೇಶನ ನಡೆಸಬೇಕು. ಇಲ್ಲಿ ಅಧಿವೇಶನ ನಡೆಸಿದ್ರೆ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಬಹುದು. ಈಗಾಗಲೇ ಬಿಡಿಎ ಮಾರಿದ್ದೀರಿ. ಇನ್ನೊಂದು ವರ್ಷ ಕಳೆದ್ರೆ ಸುವರ್ಣಸೌಧ ಮಾರಿ ಬಿಡ್ತೀರಿ.. ಒಳ್ಳೆಯ ದುಡ್ಡು ಬರುತ್ತೆ, ಎಲ್ಲರೂ ಹಂಚುಕೊಳ್ಳಬಹುದು ಅಲ್ವೇ? ಈ ಸುವರ್ಣಸೌಧ ಬಳಿಕ ಬೆಂಗಳೂರಿನ ವಿಧಾನಸೌಧ ಮಾರಿಬಿಡಿ. ನಂತ್ರ ಎಲ್ಲರೂ ಹೋಗಿ ಅಲ್ಲೇ ಕಬ್ಬನ್ ಪಾರ್ಕ್ ಅಲ್ಲಿ ಕುಳಿತುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯ ಎಂಎಲ್ಎ ಗಳೆಲ್ಲರೂ ಕಾಲು ಕಸ, ಎಂಪಿಗಳು ಕೆಟ್ಟ ಮೋರಿ ಇದ್ದಂಗೆ. ಇವರೆಲ್ಲ ಪೊಲೀಸ್ ನಾಯಿಗಳಿಗಿಂತಲೂ ಕಡೆ. ಕನ್ನಡ ದ್ರೋಹಿಗಳು, ಪಾಪಿಗಳು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವಾಜಿ ಚೌಕ್ ನಾಮಕರಣ ನಾವು ಒಪ್ಪಲ್ಲ!
ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದದ ಶಾಂತಿ ಸಭೆ ನಿರ್ಣಯಕ್ಕೆ ನಮ್ಮ ವಿರೋಧವಿದೆ. ರಾಯಣ್ಣ ಪ್ರತಿಮೆ ಜಾಗವನ್ನು ಶಿವಾಜಿ ಚೌಕ್ ಎಂದು ರಾಜೀ ಮಾಡಿಸಿದ ಅಧಿಕಾರಿ ಯಾರು? ಮರಾಠಿಯವರಿಗೆ ಕರ್ನಾಟಕದ ಅರ್ಧ ಬರೆದುಕೊಟ್ಟಿದ್ದೇರಿ ಏನ್ರಿ? ಸರ್ಕಾರ ಎಂಇಎಸ್ ನವರನ್ನು ಒದ್ದು ಹೊರಗೆ ಹಾಕಬೇಕು. ರಾಯಣ್ಣ ಪ್ರತಿಮೆ ಇರೋ ಜಾಗದಲ್ಲಿ ಶಿವಾಜಿ ಸರ್ಕಲ್ ನಾವು ಒಪ್ಪಲ್ಲ. ನಿರ್ಣಯ ಖಂಡಿಸಿ ಆಗಸ್ಟ್ 31ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೀವಿ. ಇದಕ್ಕೂ ಸರ್ಕಾರ ಬಗ್ಗದಿದ್ದರೆ ಕರ್ನಾಟಕ ಬಂದ್‌ಗೆ ಕರೆ ನೀಡ್ತೀವಿ. ಬೆಳಗಾವಿ ನಮ್ಮದು, ಮರಾಠಿಗರದ್ದು ಶಿವಸೇನೆಯವರದ್ದಲ್ಲ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಸಚಿವನಿಗೆ ಯೋಗ್ಯತೆ ಇಲ್ಲ:
ಮರಾಠಿಗರ ಮೇಲೆ ಅನ್ಯಾಯವಾಗಿದೆ ಎಂದು ಸಿಎಂ ಬಿಎಸ್‌ವೈಗೆ ಮಹಾರಾಷ್ಟ್ರ ಸಚಿವರ ಪತ್ರದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಹಾರಾಷ್ಟ್ರ ಸಚಿವನಿಗೆ ಪತ್ರ ಬರೆಯಲು ಯಾವ ಯೋಗ್ಯತೆಯೂ ಇಲ್ಲ. ಎಂಇಎಸ್ನವರನ್ನು ಇರಿಸಲು ಬೆಳಗಾವಿ ಜೈಲಿನಲ್ಲಿ ಜಾಗ ಇಲ್ಲ ಅಂದ್ರೆ ಬೆಂಗಳೂರು ಜೈಲಿಗೆ ಕಳಿಸಿ. ಬಾಳಾ ಠಾಕ್ರೆ ಬಳಿಕ ಇದೀಗ ಉದ್ಧವ್ ಠಾಕ್ರೆ ಕೂಗುತ್ತಿದ್ದಾನೆ. ಯಡಿಯೂರಪ್ಪನವರೇ ನಿಮಗೆ ನಾಲಿಗೆ ಇಲ್ವಾ. ಮರಾಠಿಗರ ವೋಟ್‌ಗಾಗಿ ಕನ್ನಡಿಗರನ್ನು ತುಳಿಯುತ್ತಿದ್ದಾರೆ. ಪ್ರಾಣ ಹೋದರೂ ಶಿವಾಜಿ ಸರ್ಕಲ್ ಮಾಡೋದಕ್ಕೆ ಬಿಡೋದಿಲ್ಲ. ಇನ್ನು 15 ದಿನದಲ್ಲಿ ನಾನು ಬೆಳಗಾವಿ ನಗರಕ್ಕೆ ಎಂಟ್ರಿ ಕೊಡ್ತೀನಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.