ಬೆಳಗಾವಿ: ಆಹಾರ ಅರಸಿ ರಸ್ತೆಗಿಳಿದ ನಾಗರ ಹಾವಿನ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಅರ್ಧ ಗಂಟೆ ಕಾಲ ಹಾವು ರಸ್ತೆಯಲ್ಲಿಯೇ ನರಳಾಡಿದ ಘಟನೆ ನಗರದ ಅಶೋಕ ವೃತ್ತದಲ್ಲಿ ನಡೆದಿದೆ.
ನಗರದಲ್ಲಿ ವಾಹನ ಸಂಚಾರ ವಿರಳವಾಗಿರುವುದರಿಂದ ವಿಷ ಜಂತು, ಹುಳುಗಳು ರಸ್ತೆಗೆ ಬರುವುದು ಸಾಮಾನ್ಯವಾಗಿದೆ. ಆದ್ರೆ, ಸಂಪೂರ್ಣ ಜನಸಂಚಾರ ಇರುವ ಅಶೋಕ ವೃತ್ತದ ಬಳಿಯ ರಸ್ತೆಯಲ್ಲಿ ಸುಮಾರು 6 ಅಡಿ ಉದ್ದಕ್ಕೂ ಹೆಚ್ಚಿನ ನಾಗರ ಹಾವೊಂದು ರಸ್ತೆಗೆ ಇಳಿದಿದೆ. ರಸ್ತೆ ದಾಟುವ ವೇಳೆ ಅಪರಿಚಿತ ವಾಹನವೊಂದು ಹಾವಿನ ಮೇಲೆ ಹರಿದಿದೆ.
ಹಾವಿನ ಬಾಯಿಯಿಂದ ರಕ್ತ ಬರುತ್ತಿರುವುದನ್ನು ಕಂಡ ಸ್ಥಳೀಯ ಯುವಕರು ಅದನ್ನು ರಸ್ತೆಯ ಬದಿಯ ಮರವೊಂದರ ಬುಡದಡಿ ಸರಿಸಿದರು. ಆದ್ರೆ, ಬಹುತೇಕ ಸಾವಿನ ಕದ ತಟ್ಟುತ್ತಿರುವ ಹಾವಿನ ಸ್ಥಿತಿ ಕಂಡ ಸಾರ್ವಜನಿಕರು ಮಾತ್ರ ವಾಹನ ಹರಿಸಿದ ಚಾಲಕನಿಗೆ ಹಿಡಿಶಾಪ ಹಾಕಿದರು.