ಬೆಳಗಾವಿ: ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಂಗಳವಾರ ತಡರಾತ್ರಿ ವಿಧಿವಶರಾಗಿದ್ದ ಸಚಿವ ಉಮೇಶ ಕತ್ತಿ ಅಂತ್ಯಕ್ರಿಯೆ ಹುಕ್ಕೇರಿ ತಾಲೂಕಿನ ಅವರ ಹುಟ್ಟೂರು ಬೆಲ್ಲದ ಬಾಗೇವಾಡಿಯಲ್ಲಿ ವೀರಶೈವ ಲಿಂಗಾಯತ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಇಂದು ಮಧ್ಯಾಹ್ನ 2ಗಂಟೆ ವೇಳೆಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಚಿವ ಉಮೇಶ ಕತ್ತಿ ಅವರ ಪಾರ್ಥಿವ ಶರೀರ ತರಲಾಯಿತು. ವಿಮಾನ ನಿಲ್ದಾಣದಲ್ಲಿ ಸರ್ಕಾರಿ ಗೌರವ ಸಲ್ಲಿಸಿ ಬಳಿಕ ಅಲಂಕೃತ ಭಾರತೀಯ ಸೇನಾ ವಾಹನದಲ್ಲಿ ಉಮೇಶ ಕತ್ತಿ ಪಾರ್ಥಿವ ಶರೀರವನ್ನ ಮೆರವಣಿಗೆ ಮೂಲಕ ಹುಕ್ಕೇರಿ ಪಟ್ಟಣದ ಮೂಲಕ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಉಮೇಶ ಕತ್ತಿ ಅವರ ವಿಶ್ವರಾಜ್ ಶುಗರ್ಸ ಕಾರ್ಖಾನೆ ಆವರಣಕ್ಕೆ ತರಲಾಗಿತ್ತು. ಬಳಿಕ ಮೂರು ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಇಡಲಾಗಿತ್ತು.
ಈ ವೇಳೆ, ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಉಮೇಶ ಕತ್ತಿ ಅವರಿಗೆ ಸರ್ಕಾರಿ ಗೌರವ ವಂದನೆ ಸಲ್ಲಿಸಿದರು. ಬಳಿಕ ಅರಣ್ಯ ಇಲಾಖೆಯಿಂದಲ್ಲೂ ಗೌರವ ವಂದನೆ ಸಲ್ಲಿಸಲಾಯಿತು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಉಮೇಶ ಕತ್ತಿ ಅವರ ಧರ್ಮಪತ್ನಿ ಶೀಲಾ ಅವರಿಗೆ ರಾಷ್ಟ್ರದ ಧ್ವಜ ಹಸ್ತಾಂತರಿಸಿದರು.
ಸಾರ್ವಜನಿಕ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಉಮೇಶ ಕತ್ತಿ ಅವರ ನಿವಾಸಕ್ಕೆ ತಂದು ಪೂಜೆ ಸಲ್ಲಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ತೋಟದಲ್ಲಿರುವ ಉಮೇಶ ಕತ್ತಿ ಅವರ ತಂದೆ ಮತ್ತು ತಾಯಿಯ ಸಮಾಧಿ ಬಳಿಯಲ್ಲಿ ಲಿಂಗಾಯತ ಧರ್ಮದ ಹಾಗೂ ಕುಟುಂಬದ ವಿಧಿವಿಧಾನಗಳ ಪ್ರಕಾರ ಸರ್ಕಾರದ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಚಿವ ಉಮೇಶ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಸ್ವಕ್ಷೇತ್ರವಾದ ಹುಕ್ಕೇರಿ ಮತಕ್ಷೇತ್ರದಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿ ಮುಚ್ಚಿ ವ್ಯಾಪಾರ ವಹಿವಾಟು ಬಂದ್ ಮಾಡುವ ಮೂಲಕ ಕ್ಷೇತ್ರದ ಶಾಸಕರಿಗ ಸಂತಾಪ ಸೂಚಿಸಿದ್ದರು. ಅಲ್ಲದೇ ಸಂಕೇಶ್ವರ ಹಾಗೂ ಹುಕ್ಕೇರಿ ಪಟ್ಟಣದ ನಾಗರಿಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಗೌರವ ನಮನ ಸಲ್ಲಿಸಿದರು.
ಉಮೇಶ ಕತ್ತಿ ಅವರ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದೆ ಮಂಗಳಾ ಅಂಗಡಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿಎಸ್.ಯಡಿಯೂರಪ್ಪ, ಬಿ.ವೈ ವಿಜೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಸಚಿವರಾದ ಆರ್.ಅಶೋಕ, ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಸಿ.ಸಿ.ಪಾಟೀಲ, ಕೋಟಾ ಶ್ರೀನಿವಾಸ ಪೂಜಾರಿ, ಕೂಡಲಸಂಗಮದ ಜಯಮೃತ್ಯುಂಜಯ ಶ್ರೀ, ನಿಡಸೋಸಿ ಪಂಚಮಶಿವಲಿಂಗೇಶ್ವರ ಶ್ರೀಗಳು ಇದ್ದರು.
(ಇದನ್ನೂ ಓದಿ: ಬೆಳಗಾವಿ ಏರ್ಪೋರ್ಟ್ನಲ್ಲಿ ಕತ್ತಿ ಪಾರ್ಥಿವ ಶರೀರ... 10 ಮಠಾಧೀಶರಿಂದ ಮಂತ್ರ ಪಠಣ, ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಸಹೋದರ)