ಬೆಳಗಾವಿ: ಕೋರ್ಟ್ ಟೈಪಿಸ್ಟ್ ಹುದ್ದೆಯ ಪರೀಕ್ಷೆ ಬರೆಯಲು ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಆಗಮಿಸಿದ್ದ ನೂರಾರು ಅಭ್ಯರ್ಥಿಗಳು ಪರೀಕ್ಷೆ ರದ್ದಾದ ಪರಿಣಾಮ ಪರದಾಡುವಂತಾಗಿದೆ.
ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಟೈಪಿಸ್ಟ್ ಹಾಗೂ ಸ್ಟೆನೋಗ್ರಫಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಮಾ.22ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಇಂದು (ಮಾ.21) ರಂದು ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಎರಡು ಹುದ್ದೆಗಳ ಪರೀಕ್ಷೆ ನಿಗದಿಪಡಿಸಲಾಗಿತ್ತು. ಅದರಂತೆ ಕೊರೊನಾ ವೈರಸ್ ಭೀತಿ ನಡುವೆಯೂ ಇಂದು ನಗರಕ್ಕೆ ನೂರಾರು ಉದ್ಯೋಗಾಕಾಂಕ್ಷಿಗಳು ಬೆಂಗಳೂರು, ಮೈಸೂರು, ಹಾಸನ, ಚಿತ್ರದುರ್ಗ, ಚಾಮರಾಜನಗರ, ಧಾರವಾಡ, ಮಂಗಳೂರು ಬೀದರ್ ,ಗುಲ್ಬರ್ಗ,ಗದಗ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಪರೀಕ್ಷೆ ಬರೆಯಲು ಆಗಮಿಸಿದ್ದರು. ಆದರೆ, ಇಂದು ಕೊರೊನಾ ಭೀತಿ ಹಿನ್ನೆಲೆ ಪರೀಕ್ಷೆ ಮೂಂದೂಡಿರುವ ಬಗ್ಗೆ ನೋಟಿಸ್ ಲಗತ್ತಿಸಲಾಗಿದೆ. ಪರೀಕ್ಷೆ ಮುಂದೂಡಿರುವ ಬಗ್ಗೆ ಅಭ್ಯರ್ಥಿಗಳಿಗೆ ಹಿಂದಿನ ದಿನ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ದೂರದ ಜಿಲ್ಲೆಗಳಿಂದ ಬಂದಿದ್ದ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಈ ಮೊದಲೇ ಮಾಹಿತಿ ನೀಡಿದ್ದರೆ, ನಾವು ಬರುತ್ತಿರಲಿಲ್ಲ. ಈಗ ನಗರದಲ್ಲಿ ಯಾವ ಹೋಟೆಲ್‌ಗಳು ಹಾಗೂ ಬಸ್ ಸಂಚಾರಗಳಿಲ್ಲ. ನಾವು ಈಗ ಏನ್ ಮಾಡ್ಬೇಕು ಎಂದು ಬೇಸರ ಹೊರಹಾಕಿದರು. ಇದೇ ವೇಳೆ ನಾವು ಪರೀಕ್ಷೆಗೆ ಬರಲು ಮಾಡಿರುವ ಎಲ್ಲಾ ಖರ್ಚು, ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದರು.