ಬೆಳಗಾವಿ: ಹುಡುಗಿಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಗಲಾಟೆಯಲ್ಲಿ ಇಬ್ಬರು ಯುವಕರಿಗೆ ಚಾಕು ಇರಿದು ಹಲ್ಲೆ ಮಾಡಿರುವ ಘಟನೆ ನಗರದ ಕಾಲೇಜು ರಸ್ತೆಯಲ್ಲಿ ಇಂದು ಸಂಜೆ ನಡೆದಿದೆ.
ನಗರದ ಸರ್ದಾರ್ ಮೈದಾನ ಪಕ್ಕದ ಕಾಲೇಜು ರಸ್ತೆಯಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದೆ. ನೋಡನೋಡುತ್ತಿದ್ದಂತೆ ಒಂದು ಗುಂಪಿನ ಯುವಕರು ಮತ್ತೊಂದು ಗುಂಪಿನ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದಿದ್ದಾರೆ. ಶ್ರೀಹರಿ ಮತ್ತು ಪರಶುರಾಮ್ ಎಂಬುವವರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸ್ಥಳಕ್ಕೆ ಕ್ಯಾಂಪ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಡಿಸಿಪಿ ರವೀಂದ್ರ ಗಡಾದಿ ಪ್ರತಿಕ್ರಿಯಿಸಿದ್ದು, "ಸಂಜೆ ಕಾಲೇಜು ಹುಡುಗರು ತಮ್ಮತಮ್ಮಲ್ಲಿಯೇ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ಮಾಡಿಕೊಂಡಿರುವರು ಒಂದೇ ಜನಾಂಗಕ್ಕೆ ಸೇರಿದ್ದಾರೆ. ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ದಾಖಲಾಗಿದೆ. ಕಾಲೇಜು ರಸ್ತೆ ಮತ್ತು ಸಮೀಪದ ಸರ್ದಾರ್ ಮೈದಾನದಲ್ಲಿ ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಗುಂಪುಗಳನ್ನು ಕಟ್ಟಿಕೊಂಡು ಹೊಡೆದಾಡಿಕೊಳ್ಳುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ : ಮೈಮೇಲೆ ದೇವಿ ಬಂದಂತೆ ವರ್ತಿಸಿ 7 ವರ್ಷದ ಸಹೋದರಿಯ ಕತ್ತು ಸೀಳಿದ 15ರ ಬಾಲೆ