ಬೆಳಗಾವಿ: ಪೂರ್ವ ಅನುಮತಿ ಇಲ್ಲದೇ ದೀರ್ಘ ಅವಧಿಯಲ್ಲಿ ಕರ್ತವ್ಯಕ್ಕೆ ಗೈರಾಗಿ ಕರ್ತವ್ಯಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಪ್ರಥಮ ದರ್ಜೆ ಸಹಾಯಕರನ್ನು (ಎಫ್ಡಿಎ) ಸರ್ಕಾರಿ ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ.
ರಾಮದುರ್ಗ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸಿ.ಎನ್. ನಾಗೂರ ಹಾಗೂ ರಾಯಬಾಗ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎ.ಬಿ.ಬಸರಗಿ ಅವರು ವಜಾಗೊಂಡವರು. ದೀರ್ಘಾವಧಿ ಕಾಲ ಅನಧಿಕೃತ ಗೈರು ಹಾಜರಾಗಿ, ಕರ್ತವ್ಯ ನಿಯೋಜನೆ ಜವಾಬ್ದಾರಿ ನಿಭಾಯಿಸದೇ ಕರ್ತವ್ಯಲೋಪ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸಿ.ಎನ್. ನಾಗೂರ ಅವರು ಗೈರಾಗಿರುವ ಬಗ್ಗೆ ಕಾರಣ ಕೇಳಿ ರಾಮದುರ್ಗ ತಹಶೀಲ್ದಾರ್ ಅವರು ಲಿಖಿತ ನೋಟಿಸ್ ಜಾರಿಗೊಳಿಸಿದ್ದರು. ಆದರೂ ಸೂಕ್ತ ಕಾರಣ ಹಾಗೂ ದಾಖಲಾತಿ ನೀಡಿರಲಿಲ್ಲ. ಅದೇ ರೀತಿ ಎ.ಬಿ. ಬಸರಗಿ ಕೂಡ ಲಿಖಿತ ಹೇಳಿಕೆ ಸಲ್ಲಿಸಿದ್ದು, ಕಾರಣ ಸಮಂಜಸವಾಗಿರಲಿಲ್ಲ. ಈ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಿದಾಗ ಆರೋಪ ಸಾಬೀತಾಗಿದೆ.
ಹೀಗಾಗಿ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 8 (8)ರ ಮೇರೆಗೆ ವಜಾಗೊಳಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಟೆಂಡರ್ ಬಿಡ್ ತೆರೆಯುವ ಮುನ್ನ ಬದಲಾವಣೆ ಮಾಡಬಹುದು: ಹೈಕೋರ್ಟ್