ಬೆಳಗಾವಿ : ಅಕ್ರಮ ಕೃಷಿ ಪಂಪ್‌ಸೆಟ್‍ಗಳನ್ನು ಸಕ್ರಮಗೊಳಿಸುವ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲ ರೈತರಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು. ಇಂದು ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ನಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಕ್ರಮ ಸಕ್ರಮ ಯೋಜನೆಯಡಿ 1.36 ಲಕ್ಷ ಅರ್ಜಿಗಳು ಬಂದಿದ್ದು, ಈ ಪೈಕಿ ಈಗಾಗಲೇ 66,889 ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಉಳಿದವರಿಗೆ ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಹಸಿರು ಇಂಧನ ಉತ್ಪಾದನೆಗೆ ಸರ್ಕಾರ ವಿಶೇಷ ಒತ್ತು ನೀಡಿದೆ. ಈ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆಯಲು ರೈತರು 10 ಸಾವಿರ ರೂ. ಪಾವತಿಸಬೇಕಿದೆ. ಆದರೆ ವಿದ್ಯುತ್ ಕಂಪನಿಗಳು ಒಂದೂವರೆ ಲಕ್ಷ ರೂ. ವೆಚ್ಚ ಭರಿಸಬೇಕು. ರಾಜ್ಯದಲ್ಲಿ 2014 ರೈತರಿಗೆ ತತ್ಕಾಲ್ ಯೋಜನೆಯಡಿ ಟ್ರಾನ್ಸ್ ಫಾರ್ಮರ್ ಒದಗಿಸಬೇಕಾಗಿದ್ದು, ಹಣಕಾಸಿನ ಲಭ್ಯತೆ ಆಧಾರದ ಮೇಲೆ ಶೀಘ್ರ ಒದಗಿಸಲು ಸಚಿವರು ಭರವಸೆ ನೀಡಿದರು.
ಮಧುಗಿರಿ ಕ್ಷೇತ್ರದಲ್ಲಿ 2014 ರಿಂದ 2022 ರ ನವೆಂಬರ್‌ವರೆಗೆ ತತ್ಕಾಲ್ ಯೋಜನೆಯಡಿ 666 ರೈತರು ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರ್ಜಿ ಸಲ್ಲಿಸಿದ್ದರು. ಈಗಾಗಲೇ 532 ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಬಾಕಿ ಉಳಿದಿರುವ 134 ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದೆ. ಮೂಲಸೌಕರ್ಯ ರಚಿಸಿಕೊಂಡು ಜೇಷ್ಠತೆ ಆಧಾರದ ಮೇಲೆ ಪರಿವರ್ತಕ ಒದಗಿಸಿ ವಿದ್ಯುತ್ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ನಿರಂತರ ಜ್ಯೋತಿ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಕೊಡಲು ಸಿದ್ಧ: ಸಚಿವ ಸುನೀಲ್ ಕುಮಾರ್
ಕಾಮಗಾರಿ ಪ್ರಗತಿ: ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಹಿರೇಬಾಗೇವಾಡಿ-ಹಾಲಗಿಮರ್ಡಿ ಗ್ರಾಮದಲ್ಲಿ ಮಂಜೂರಾದ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ, ಹಾಗೂ ಮೊದಲ ಹಂತದ ಕಟ್ಟಡ ಕಾಮಗಾರಿ, ಸಂಪರ್ಕ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಾಂಗ್ರೆಸ್ ಸದಸ್ಯೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರಶ್ನೆಗೆ ಉತ್ತರಿಸಿದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕಾಗಿ 126 ಎಕರೆ 27 ಗುಂಟೆ ಸರ್ಕಾರಿ ಜಮೀನು ಮೀಸಲಿರಿಸಲಾಗಿದೆ. ಮಾರುಕಟ್ಟೆ ದರದ ಶೇ.50 ದರ ಮತ್ತು ನಿಯಮಾನುಸಾರ ಇತರೆ ಶುಲ್ಕ ಭರಿಸಿ ಮಂಜೂರಾತಿ ಪಡೆಯಲಾಗಿದೆ. ಆದರೆ, ರೈತರಿಂದ ಜಮೀನನ್ನು ಭೂ ಸ್ವಾಧೀನಪಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿ ಪ್ರಾರಂಭಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಡಿಸೆಂಬರ್ 9ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರೈತರು ಮತ್ತು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಸಭೆ ನಡೆಸಿಲಾಗಿತ್ತು. ನಂತರ ಸಭೆಯಲ್ಲಿ ತೆಗೆದುಕೊಂಡ ನಿರ್ಮಾಣದಂತೆ ಕಂದಾಯ ನಕಾಸೆಯಲ್ಲಿ ರಸ್ತೆ ಇಲ್ಲದಿದ್ದರೂ ರೈತರು ಕಬ್ಬು ಹಾಗೂ ಇತರೆ ವಸ್ತುಗಳನ್ನು ಸಾಗಿಸಲು ರಸ್ತೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ. ಕಾಂಪೌಂಡ್ ಗೋಡೆ ತೆರವು ಗೊಳಿಸಿ ರೈತರ ಅನುಕೂಲದ ರಸ್ತೆಗೆ 14 ಎಕರೆ ಬಿಟ್ಟುಕೊಟ್ಟು ಸರ್ಕಾರದಿಂದ ಪರ್ಯಾಯ ಜಮೀನು ಪಡೆಯಲು ತೀರ್ಮಾನಿಸಲಾಗಿದೆ. ಶಾಸಕರ ರಾಜಕೀಯ ಆಪಾದನೆ ಸರಿಯಲ್ಲ. ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದರು.