ಬೆಳಗಾವಿ: ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿದ್ದಲ್ಲಿ ರೈಲು ಬೋಗಿಗಳನ್ನೇ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಸಲುವಾಗಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಷ್ಟಾಗಿಯೂ ವೈರಸ್ ನಿಯಂತ್ರಣಕ್ಕೆ ಬಾರದಿದ್ರೆ ಸಹಜವಾಗಿಯೇ ಸೋಂಕಿತರ ಸಂಖ್ಯೆ ಹೆಚ್ಚುತ್ತದೆ. ಈ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗಳ ಕೊರತೆ ಎದುರಾಗಬಹುದು. ಹಾಗಾಗಿ, ರೈಲು ಬೋಗಿಗಳನ್ನೇ ಆಸ್ಪತ್ರೆಗಳಾಗಿ ಪರಿವರ್ತಿಸಬೇಕಾಗುತ್ತೆ. ಅದಕ್ಕಾಗಿ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಲಾಕ್‌ಡೌನ್ ಆದೇಶವನ್ನು ದೇಶದ ಜನತೆ ಕಳೆದ 8 ದಿನಗಳಿಂದ ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಜನರು ಗಂಭೀರವಾಗಿ ಲಾಕ್‌ಡೌನ್ ಆದೇಶ ಪಾಲಿಸಬೇಕಿದೆ. ಅಗತ್ಯ ವಸ್ತುಗಳ ಪೂರೈಕೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ದೇಶದ ಜನರು ಏ. 14 ರವರೆಗೆ ಮನೆಯಲ್ಲಿಯೇ ಇರಬೇಕು ಎಂದು ಸಚಿವರು ಮನವಿ ಮಾಡಿದರು.
ಹೊರ ರಾಜ್ಯಗಳ ಕಾರ್ಮಿಕರಿಗೆ ಅಗತ್ಯ ಸೌಕರ್ಯ ಒದಗಿಸಬೇಕು. ಗೋವಾ ಹಾಗೂ ರಾಜಸ್ಥಾನದ ಕಾರ್ಮಿಕರಿಗೆ ನಾವು ಊಟ, ವಸತಿ ನೀಡುತ್ತಿದ್ದೇವೆ. ಅದೇ ರೀತಿ ನಮ್ಮ ರಾಜ್ಯದ ಕಾರ್ಮಿಕರಿಗೂ ಬೇರೆ ರಾಜ್ಯಗಳು ಮಾನವೀಯತೆ ದೃಷ್ಟಿಯಿಂದ ಅಗತ್ಯ ಸೌಕರ್ಯ ನೀಡಬೇಕು. ಮಾರುಕಟ್ಟೆಗಳಲ್ಲಿ ಜನಜಂಗುಳಿ ನಿಯಂತ್ರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.