ಬೆಳಗಾವಿ: ಸಂಸತ್ನಲ್ಲಿ ಭದ್ರತಾ ಲೋಪವಾಗಿರುವ ಹಿನ್ನೆಲೆ ಸುವರ್ಣಸೌಧದಲ್ಲೂ ಇಂದು ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ. ಸುವರ್ಣಸೌಧದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಸಂಬಂಧ ಸ್ಪೀಕರ್ ಯು ಟಿ ಖಾದರ್ ಸೂಚನೆ ನೀಡಿದ್ದು, ಸುವರ್ಣಸೌಧ ಪ್ರವೇಶಿಸುವ ನಾಲ್ಕು ದ್ವಾರಗಳ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಸೂಕ್ತ ಪ್ರವೇಶ ಪಾಸ್ಗಳಿದ್ದರೆ ಮಾತ್ರ ಒಳಗೆ ಹೋಗಲು ಅನುವು ಮಾಡಿಕೊಡಲಾಗುತ್ತಿದೆ.
ಇತ್ತ ಪೊಲೀಸರು ಎಲ್ಲಾ ದ್ವಾರಗಳಲ್ಲಿ ಪಾಸ್ಗಳನ್ನು ತಪಾಸಣೆ ಮಾಡಿ ಒಳಗೆ ಬಿಡುತ್ತಿದ್ದಾರೆ. ಯಾರ ಬಳಿ ಸೂಕ್ತ ಪಾಸ್ ಇಲ್ಲವೋ, ಅವರನ್ನು ಒಳ ಹೋಗಲು ತಡೆಯುತ್ತಿದ್ದಾರೆ. ಹೀಗಾಗಿ ಸಚಿವರು, ಶಾಸಕರ ಜೊತೆ ಬರುವ ಬೆಂಬಲಿಗರಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ. ಈ ವೇಳೆ ಪೊಲೀಸರು ಮತ್ತು ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದೆ.
ನಿನ್ನೆ ಸಂಸತ್ನಲ್ಲಿ ಘಟನೆ ನಡೆದ ತಕ್ಷಣ ಚೀಫ್ ಮಾರ್ಷಲ್ಗಳ ಸಭೆ ಕರೆದು, ಸ್ಪೀಕರ್ ಯು.ಟಿ ಖಾದರ್, ಸದನ ಕಲಾಪದಲ್ಲಿ ಭದ್ರತೆ ಬಿಗಿ ಮಾಡಲು ಸೂಚಿಸಿದ್ದರು. ಈ ಹಿನ್ನೆಲೆ ಸುವರ್ಣಸೌಧದಲ್ಲಿ ನಿನ್ನೆಯೇ ಪೊಲೀಸರು ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದರು. ಸುವರ್ಣಸೌಧದ ವಿಧಾನಸಭೆ ಪ್ರವೇಶ ದ್ವಾರದ ಮಹಡಿಯಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಇದರ ಜೊತೆಗೆ ಸುವರ್ಣಸೌಧ ಪ್ರವೇಶಿಸುವ ಸಾರ್ವಜನಿಕರನ್ನೂ ಹೆಚ್ಚಿನ ತಪಾಸಣೆ ಮಾಡಿ ಒಳ ಬಿಡಲಾಗುತ್ತಿದೆ.
ಸಂಸತ್ನಲ್ಲಿ ಭದ್ರತಾ ಲೋಪ: ಬುಧವಾರ ಲೋಕಸಭೆ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಇಬ್ಬರು ಯುವಕರು ಸದನದೊಳಗೆ ಜಿಗಿದಿದ್ದರು. ಸದನದೊಳಗೆ ಯುವಕರು ಸ್ಮೋಕ್ ಕ್ರ್ಯಾಕರ್ ಅನ್ನು ಸ್ಪ್ರೇ ಮಾಡಿದ್ದರು. ಈ ವೇಳೆ ಭಯಗೊಂಡ ಸಚಿವರು ಹಾಗೂ ಸಂಸದರು ಆತಂಕದಿಂದ ಅಡ್ಡಾದಿಡ್ಡಿಯಾಗಿ ಹೊರಗಡೆ ಬಂದಿದ್ದರು. ಇದೇ ಸಮಯಕ್ಕೆ ಹೊರಗಿನ ಗೇಟ್ ಬಳಿ ಇದ್ದ ಯುವತಿಯೊಬ್ಬಳು ಅದೇ ರೀತಿ ಬಣ್ಣವನ್ನು ಸ್ಪ್ರೇ ಮಾಡಿದ್ದಳು.
2001ರಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆಸಿದ ಘಟನೆ ಸರಿಯಾಗಿ 22 ವರ್ಷ ತುಂಬಿದ ದಿನವೇ ಮತ್ತೆ ಸಂಸತ್ನಲ್ಲಿ ಭದ್ರತಾ ಲೋಪವಾಗಿರುವ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಆರು ಜನ ಭಾಗಿಯಾಗಿದ್ದು, ಈವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆ ನಂತರ ಸಂಸತ್ನಲ್ಲಿ ಭದ್ರತಾ ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಇದುವರೆಗೆ ತಪಾಸಣೆ ವೇಳೆ ಶೂ ತಪಾಸಣೆ ಮಾಡದೇ ಇದ್ದ ಭದ್ರತಾ ಸಿಬ್ಬಂದಿ, ಪ್ರತಿಯೊಬ್ಬರ ಶೂಗಳನ್ನು ತಪಾಸಣೆ ನಡೆಸಿ, ಕಳುಹಿಸುತ್ತಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕರ ನೈಜತೆ ನೋಡಿಕೊಂಡು ವಿಧಾನಸಭೆಗೆ ಪಾಸ್ ವಿತರಿಸಲು ಸ್ಪೀಕರ್ ಯು ಟಿ ಖಾದರ್ ಸೂಚನೆ