ಅಥಣಿ/ಚಿಕ್ಕೋಡಿ: ಉಪಚುನಾವಣೆ ಕಣ ರಂಗೇರಿದ್ದು, ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರು ತಮ್ಮ,ತಮ್ಮ ಅಭ್ಯರ್ಥಿಗಳ ಪರ ಮತ ಪ್ರಚಾರವನ್ನು ಬರದಿಂದ ನಡೆಸುತ್ತಿದ್ದಾರೆ.
ಇಂದು ಅಥಣಿ ತಾಲೂಕಿನ ನದಿ ಇಂಗಳಗಾಂವ, ದರೂರ, ಹಲ್ಯಾಳ, ಸಪ್ತಸಾಗರ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಲಕ್ಷ್ಮಿ ಹೆಬ್ಬಾಳಕರ ಮತ್ತು ಎಮ್ .ಬಿ. ಪಾಟೀಲ್ ಮತಯಾಚಿಸಿದರೆ ಇತ್ತ ಡಿಸಿಎಮ್ ಲಕ್ಷ್ಮಣ ಸವದಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರವಾಗಿ ಮತಬೇಟೆಯಲ್ಲಿ ತೊಡಗಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳಕರ್, ರಮೇಶ್ ಜಾರಕಿಹೊಳಿ ಕುರಿತು ಪ್ರಶ್ನೆ ಮಾಡಿದ ಮಾಧ್ಯಮದವರಿಗೆ ಏನೂ ಉತ್ತರಿಸದೆ ಅವರು ದೊಡ್ಡವರು. ದೇವರು ಎಂದು ಆಕಾಶ ದಿಟ್ಟಿಸಿ ಕೈ ಮುಗಿದರು. ನಂತರ ಬೆಳಗಾವಿ ರಾಜಕಾರಣದಿಂದ ಹೊರ ಬರುವ ಹಾಗೂ ಇನ್ನಷ್ಟು ಜನ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಬಸ್ಮಾಸುರ ಕಥೆ ಹೇಳಿದರು. ಬಸ್ಮಾಸುರ ಯಾರು ಎನ್ನುವ ಪ್ರಶ್ನೆಗೆ ಯಾವುದೇ ಉತ್ತರ ನೀಡದೆ ಮೌನವಾಗಿ ತೆರಳಿದರು.
ಜೆಡಿಎಸ್ ಪರ ಶಾಸಕ ವೆಂಕಟರಾವ್ ನಾಡಗೌಡ, ಕೋನರೆಡ್ಡಿ ಮತಯಾಚನೆ:
ಹಾಗೆಯೇ ಕಾಗವಾಡ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ತುಗಶೆಟ್ಟಿ ಪರ ಶಾಸಕ ವೆಂಕಟರಾವ್ ನಾಡಗೌಡ ಮತ್ತು ಕೋನರೆಡ್ಡಿ ಬಿರುಸಿನ ಪ್ರಚಾರ ನಡೆಸಿದರು. ಕಾಗವಾಡ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ತುಗಶೆಟ್ಟಿ ಅವರು ಕೆಲಸಗಾರ. ಸೌಮ್ಯ ಸ್ವಭಾವದ ಸರಳ ವ್ಯಕ್ತಿ. ಸಾಮಾನ್ಯ ಜನರಿಗೆ ಸಿಗುವ ಇವರನ್ನು ಗೆಲ್ಲಿಸಿದರೆ ಕಾಗವಾಡ ಮತಕ್ಷೇತ್ರ ಅಭಿವೃದ್ಧಿಯಾಗಲಿದೆ ಎಂದು ಮಾಜಿ ಶಾಸಕ ಕೊನರಡ್ಡಿ ಮತದಾರರಲ್ಲಿ ಮತಯಾಚನೆ ಮಾಡಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಉಗಾರ, ಕುಸುನಾಳ, ಜೂಗುಳ, ಶಾಹಾಪುರ ಹೀಗೆ ವಿವಿಧ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.