ಬೆಳಗಾವಿ: ಹೊಲಕ್ಕೆ ತೆರಳುತ್ತಿದ್ದಾಗ ಅಪರಿಚಿತ ವಾಹನ ಹರಿದು ಮೂವರು ರೈತರು ಮೃತಪಟ್ಟು, ಓರ್ವ ಗಾಯಗೊಂಡ ದುರ್ಘಟನೆ ಖಾನಾಪುರ ತಾಲೂಕಿನ ಗೋಧೋಳಿ ಗ್ರಾಮದ ಹೊರವಲಯದ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಇಬ್ಬರು ಸ್ಥಳದಲ್ಲೇ ಅಸುನೀಗಿದರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಗೋಧೋಳಿ ಗ್ರಾಮದ ಮಹಾಬಲೇಶ್ವರ ಶಿಂಧೆ (65), ಪುಂಡಲೀಕ ರೇಡೇಕರ (72) ಸ್ಥಳದಲ್ಲೇ ಮೃತರು. ಗಂಭೀರವಾಗಿ ಗಾಯಗೊಂಡು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದ ಕೃಷ್ಣ ರೇಡೇಕರ (74) ಕೂಡ ಚಿಕಿತ್ಸೆ ಫಲಿಸದೇ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವ ಗಾಯಾಳು ಮಂಜುನಾಥ ಕಾಗಿನಕರ (47) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕ್ಕಿ ಬಳಿಕ ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾನೆ. ನಂದಗಡ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : 2003ರಲ್ಲಿ ಯುವತಿ ವಿಷಯವಾಗಿ ಗೆಳೆಯನ ಕೊಲೆ: 2023ರಲ್ಲಿ ಆರೋಪಿ ತಪ್ಪೊಪ್ಪಿಗೆ.. ಮೂಳೆಗಳು ಹೊರಕ್ಕೆ
ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಕಬ್ಬಿಗೆ ನೀರು ಹಾಯಿಸಲು ನಡೆದುಕೊಂಡು ಹೊರಟಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದ ಸುದ್ದಿ ತಿಳಿದ ಕೂಡಲೇ ಮಾಜಿ ಶಾಸಕ ಅರವಿಂದ ಪಾಟೀಲ ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳು ಮತ್ತು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಶಾಸಕಿ ಅಂಜಲಿ ನಿಂಬಾಳ್ಕರ್ ಖಾನಾಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ : ಅತ್ಯಾಚಾರವೆಸಗಿ ಬಾಲಕಿ ಕೊಲೆ ಆರೋಪ: ಪ.ಬಂಗಾಳದ ಕಲಿಯಾಗಂಜ್ ಪ್ರಕ್ಷುಬ್ಧ