ಬೆಳಗಾವಿ: ಕುಂದಾನಗರಿಯ ಮನೆಗಳಿಗೆ ಕನ್ನ ಹಾಕುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಮಹಾನಗರ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದು, ಒಟ್ಟು 8.77 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.
ಅನಗೋಳದ ಸಾಯೀದ್ ಇಬ್ರಾಯಿಂ ಲಸ್ಕರವಾಲೆ (21), ಅಬ್ದುಲ್ಘನಿ ಶಬ್ಬೀರ ಶೇಖ್ (22) ಹಾಗೂ ಮಹ್ಮದ್ ಸಿದ್ದಿಕ್ (22) ಬಂಧಿತರು. ಅನಗೋಳ ರಸ್ತೆಯ ಭಾಗ್ಯನಗರದಲ್ಲಿ ಮನೆಗಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಮೂವರನ್ನು ಸಿಸಿಐಬಿ ಹಾಗೂ ಟಿಳಕವಾಡಿ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಹಾನಗರದ 10 ಮನೆಗಳ ಕಳ್ಳತನ ಪ್ರಕರಣದಲ್ಲಿ ಈ ಮೂವರು ಭಾಗಿಯಾಗಿದ್ದಾರೆ. ಆರೋಪಿತರಿಂದ 4.85 ಲಕ್ಷ ಮೌಲ್ಯದ 149 ಗ್ರಾಂ ಚಿನ್ನ, 3.91 ಲಕ್ಷ ಮೌಲ್ಯದ 10.70 ಕೆಜಿ ಬೆಳ್ಳಿ ಆಭರಣ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.