ಬೆಳಗಾವಿ: ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಗೆ, ಅಸಹಕಾರ ತೋರಿದ ಮುಖ್ಯಶಿಕ್ಷಕಿಯನ್ನು ವರ್ಗಾವಣೆ ಮಾಡುವಂತೆ ಗ್ರಾಮಸ್ಥರು ಧರಣಿ ನಡೆಸಿದ್ದಾರೆ. ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿದೆ.
ಲಿಂಗನಮಠ ಗ್ರಾಮದ ಕೆವಿಜಿ ಬ್ಯಾಂಕ್ ಹಗಲಲ್ಲಿಯೇ ಮೂರು ಬಾರಿ ಕಳ್ಳತನವಾಗಿತ್ತು. ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಐಪಿಎಸ್ ಪ್ರೋಬೇಷನರಿ ಅಧಿಕಾರಿ ಪ್ರದೀಪ್ ಗುಂಟೆಯವರಿಗೆ ತನಿಖೆಯ ಜವಾಬ್ದಾರಿಯನ್ನು ನೀಡಿದ್ದರು.
ಬ್ಯಾಂಕ್ ಮುಂಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆ ಸಿಸಿ ಕ್ಯಾಮರಾ ದೃಶ್ಯಾವಳಿ ನೀಡುವಂತೆ ಪೊಲೀಸ್ ಅಧಿಕಾರಿ ಶಾಲೆಯ ಮುಖ್ಯಶಿಕ್ಷಕಿ ಜ್ಯೋತಿ ಭಂಡಾರಿ ಅವರನ್ನು ಕೇಳಿಕೊಂಡಿದ್ದರು. ಆದರೆ ಜ್ಯೋತಿ ಭಂಡಾರಿ ಸಿಸಿ ಕ್ಯಾಮರಾ ಫುಟೇಜ್ ನೀಡಲು ನಿರಾಕರಿಸಿದ್ದರು. ಸಿಸಿ ಕ್ಯಾಮರಾಗಳ ಫುಟೇಜ್ ಕಂಪ್ಯೂಟರ್ನಲ್ಲಿದೆ. ಕೀ ನನ್ನ ಬಳಿ ಇಲ್ಲ, ಟೆಕ್ನಿಷಿಯನ್ ಬಳಿ ಇದೆ ಎಂದು ಪೊಲೀಸರನ್ನು ಮೂರು ಗಂಟೆಕಾಲ ಕಾಯಿಸಿದ್ದಾರೆ ಎನ್ನಲಾಗಿದೆ.
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದರೂ ಸಹ, ಶಿಕ್ಷಕಿ ಜ್ಯೋತಿ ಕ್ಯಾರೆ ಎಂದಿರಲಿಲ್ಲ. ಈ ಹಿನ್ನೆಲೆ ಪೊಲೀಸರಿಗೆ ಅಸಹಕಾರ ನೀಡಿದ್ದಕ್ಕೆ, ಅವರನ್ನು ವರ್ಗಾವಣೆ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.